Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಶ್ರೀಲಂಕಾ ಮಣಿಸಿ ಭಾರತಕ್ಕೆ ಮೊದಲ ಚಿನ್ನ: ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ

ನಿಸ್ಸಿನ್, ಸೆ. 22 : ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಶ್ರೀಲಂಕಾವನ್ನು 147 ರನ್‌ಗಳ ಭಾರೀ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, 20 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಇದು ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತಿ ದೊಡ್ಡ ಮೊತ್ತವಾಗಿದೆ.

ಮಂಧಾನ-ಶಫಾಲಿ ಭರ್ಜರಿ ಆರಂಭ

ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 99 ರನ್‌ಗಳ ಜೊತೆಯಾಟವಾಡಿ ಭಾರತದ ಬೃಹತ್ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿದರು. ಮಂಧಾನ ಕೇವಲ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 79 ರನ್ ಸಿಡಿಸಿದರೆ, ಶಫಾಲಿ 29 ಎಸೆತಗಳಲ್ಲಿ 48 ರನ್ ಗಳಿಸಿದರು.

ಈ ಇನ್ನಿಂಗ್ಸ್ ವೇಳೆ ಸ್ಮೃತಿ ಮಂಧಾನ ಮತ್ತೊಂದು ಮಹತ್ವದ ಮೈಲುಗಲ್ಲನ್ನೂ ತಲುಪಿದರು. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 19 ರನ್ ಗಳಿಸಿದರೆ, ಕೊನೆಯ ಓವರ್‌ಗಳಲ್ಲಿ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 22 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 49 ರನ್ ಬಾರಿಸಿ ತಂಡದ ಮೊತ್ತವನ್ನು 216ಕ್ಕೆ ಕೊಂಡೊಯ್ದರು.

69 ರನ್‌ಗೆ ಶ್ರೀಲಂಕಾ ಆಲೌಟ್

217 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಿಂದಲೇ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ನಾಯಕಿ ಚಾಮರಿ ಅತಪತ್ತು 21 ಎಸೆತಗಳಲ್ಲಿ 29 ರನ್ ಗಳಿಸಿದ್ದು ಲಂಕಾ ಪರ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಉಳಿದ ಬ್ಯಾಟರ್‌ಗಳಿಗೆ ಭಾರತದ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಶ್ರೀಲಂಕಾ 15.4 ಓವರ್‌ಗಳಲ್ಲಿ 69 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಕೇವಲ 6 ರನ್ ನೀಡಿ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಶಫಾಲಿ ವರ್ಮಾ, ಶ್ರೀಚರಣಿ ಹಾಗೂ ಶ್ರೇಯಾಂಕ ಪಾಟೀಲ ತಲಾ ಎರಡು ವಿಕೆಟ್ ಪಡೆದು ಲಂಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇದರೊಂದಿಗೆ ಭಾರತ 147 ರನ್‌ಗಳ ಅಂತರದಿಂದ ಜಯ ದಾಖಲಿಸಿತು. ಇದು ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ಗಳ ಅಂತರದ ದೃಷ್ಟಿಯಿಂದ ಭಾರತದ ಅತಿ ದೊಡ್ಡ ಗೆಲುವು ಎಂಬ ದಾಖಲೆಯನ್ನೂ ನಿರ್ಮಿಸಿತು.

ಸತತ ಎರಡನೇ ಚಿನ್ನ

ಭಾರತ ಮಹಿಳಾ ತಂಡಕ್ಕೆ ಇದು ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಚಿನ್ನದ ಪದಕ. ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನೇ ಸೋಲಿಸಿ ಚಿನ್ನ ಗೆದ್ದಿತ್ತು. ಆ ಕ್ರೀಡಾಕೂಟ 2022ರ ಆವೃತ್ತಿಯಾಗಿದ್ದರೂ ಕೋವಿಡ್ ಕಾರಣದಿಂದ 2023ರಲ್ಲಿ ನಡೆದಿತ್ತು.

ಈ ಬಾರಿಯೂ ಭಾರತ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿದೆ. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು. ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸಿ ಫೈನಲ್‌ಗೆ ಬಂದಿತ್ತು.

ವಿಶೇಷವೆಂದರೆ, ಸೆ.13ರಂದು ನಡೆದ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿಯೂ ಭಾರತ ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಕೇವಲ ಒಂಬತ್ತು ದಿನಗಳ ಅಂತರದಲ್ಲಿ ಮತ್ತೊಮ್ಮೆ ಶ್ರೀಲಂಕಾವನ್ನು ಪ್ರಶಸ್ತಿ ಪಂದ್ಯದಲ್ಲಿ ಮಣಿಸಿರುವ ಹರ್ಮನ್‌ಪ್ರೀತ್ ಪಡೆ, ಈಗ ಏಷ್ಯನ್ ಗೇಮ್ಸ್ ಚಿನ್ನವನ್ನೂ ತನ್ನಲ್ಲೇ ಉಳಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗಳಲ್ಲಿ 216/3 (ಸ್ಮೃತಿ ಮಂಧಾನ 79, ರಿಚಾ ಘೋಷ್ ಅಜೇಯ 49, ಶಫಾಲಿ ವರ್ಮಾ 48); ಶ್ರೀಲಂಕಾ 15.4 ಓವರ್‌ಗಳಲ್ಲಿ 69 ಆಲೌಟ್ (ಚಾಮರಿ ಅತಪತ್ತು 29; ದೀಪ್ತಿ ಶರ್ಮಾ 3/6). ಭಾರತಕ್ಕೆ 147 ರನ್‌ಗಳ ಜಯ ಹಾಗೂ ಚಿನ್ನದ ಪದಕ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ