ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ
ಯಾದಗಿರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿ: ಯಾದಗಿರಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಅಪರ ಆಯುಕ್ತರಾದ ಶ್ರೀ ರಾಹುಲ್ ಪಾಂಡವೆ ಅವರು ವಹಿಸಿದ್ದರು. ಜಿಲ್ಲಾಧಿಕಾರಿಗಳಾದ ಶ್ರೀ ಹರ್ಷಲ್ ಬೋಯರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಲವೀಶ ಒರಡಿಯಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪ ನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿ, ದತ್ತು ಪಡೆದ ಶಾಲೆಗಳ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಫಲಿತಾಂಶ ಸುಧಾರಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಪ್ರಾಮಾಣಿಕ ಹಾಗೂ ನಿರಂತರ ಪ್ರಯತ್ನ ಕೈಗೊಳ್ಳಬೇಕೆಂದು ಅಪರ ಆಯುಕ್ತರಾದ ಶ್ರೀ ರಾಹುಲ್ ಪಾಂಡವೆ ಅವರು ಸೂಚಿಸಿದರು. ವಿದ್ಯಾರ್ಥಿಗಳ ಸಾಧನೆ ಹೆಚ್ಚಿಸಲು 40+ ಪ್ಯಾಕೇಜ್ ಅನ್ನು ಪರಿಣಾಮಕಾರಿಯಾಗಿ ಬಳಸಬೇಕು ಹಾಗೂ ಮಂಡಳಿಯಿಂದ ಪ್ರಕಟಿಸಲಾದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಮರ್ಪಕವಾಗಿ ಅಭ್ಯಾಸ ಮಾಡಿಸುವಂತೆ ಸಲಹೆ ನೀಡಿದರು. ಜೊತೆಗೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾನಸಿಕ ಧೈರ್ಯ ತುಂಬುವ ಕೆಲಸ ಶಿಕ್ಷಕರು ಮಾಡಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ, ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಯಿತು.