ಸಕಲೇಶಪುರ, ಸೆ. 16 : ಹಾಸನ ಜಿಲ್ಲೆಯ ಸಕಲೇಶಪುರದ ಲಾಡ್ಜ್ವೊಂದರಲ್ಲಿ ಬೆಂಗಳೂರಿನ 23 ವರ್ಷದ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ಯುವತಿಯನ್ನು ವರ್ಷಾ ಎಂದು ಗುರುತಿಸಲಾಗಿದೆ. ಸೆ. 11ರಂದು ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಸಕಲೇಶಪುರಕ್ಕೆ ಆಗಮಿಸಿದ್ದ ಅವರು ಲಾಡ್ಜ್ನಲ್ಲಿ ತಂಗಿದ್ದರು ಎನ್ನಲಾಗಿದೆ.
ಸ್ನಾನಕ್ಕೆ ತೆರಳುವ ಮುನ್ನ ವರ್ಷಾ ಚಾಕೊಲೇಟ್ ತಿಂದಿದ್ದು, ಬಳಿಕ ಸ್ನಾನಗೃಹದತ್ತ ಹೋಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಯುವತಿಯ ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಸದ ವೇಳೆ ಅವರೊಂದಿಗೆ ಇದ್ದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ವರ್ಷಾ ಸಕಲೇಶಪುರಕ್ಕೆ ತೆರಳಿರುವ ವಿಷಯ ಅವರ ಪೋಷಕರಿಗೂ ತಿಳಿದಿತ್ತು ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಕಾರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.