Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

‘ಸಾಮಾಜಿಕ ಬಹಿಷ್ಕಾರ’ ಆರೋಪಕ್ಕೆ ಸ್ವಕುಳ ಸಾಳಿ ಸಮಾಜದ ತಿರುಗೇಟು

ವಿಶೇಷ ವರದಿ

  • ಲೆಕ್ಕಪತ್ರ ವಿಚಾರದಿಂದ ಉಂಟಾದ ಒಳಜಗಳವನ್ನೇ ಅತಿರಂಜಿತವಾಗಿ ಬಿಂಬಿಸಿದ ಮಾಧ್ಯಮಗಳು ಎಂದು ಆರೋಪ

  • ಹನ್ನೆರಡು ಕುಟುಂಬಗಳಿಗೆ ಬಹಿಷ್ಕಾರ ಎಂಬ ವರದಿ ಸತ್ಯಕ್ಕೆ ದೂರವಾದದ್ದು : ಸಮಾಜದ ಮುಖಂಡರು

  • ಜಿಲ್ಲಾಡಳಿತದಿಂದ ಸತ್ಯಾಸತ್ಯತೆ ಪರಿಶೀಲನೆಗೆ ಒತ್ತಾಯ


ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸ್ವಕುಳ ಸಾಳಿ ಸಮಾಜದಲ್ಲಿ ಹನ್ನೆರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆ ಸಮಾಜದ ಮುಖಂಡರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಂಘದ ಲೆಕ್ಕಪತ್ರ ವಿಚಾರಕ್ಕೆ ಸಂಬಂಧಿಸಿದ ಒಳ ವೈಮನಸ್ಸನ್ನೇ ಸಾಮಾಜಿಕ ಬಹಿಷ್ಕಾರ ಎಂದು ಬಿಂಬಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದಾನಂದ ಪಾಣಿಭಾತಿ ಅವರ ಅಧ್ಯಕ್ಷತ್ವ ಅವಧಿಯ ಆಯ-ವ್ಯಯ ಲೆಕ್ಕಪತ್ರಗಳ ಬಗ್ಗೆ ಕೇಳಿದ ಬಳಿಕ ವಿವಾದ ಉಂಟಾಗಿದೆ ಎನ್ನಲಾಗಿದ್ದು, ಬದುಕುವ ಹಕ್ಕುಗಳ ಮೇಲಿನ ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಸ್ವಕುಳ ಸಾಳಿ ಸಮಾಜದೊಳಗೆ ಉಂಟಾಗಿರುವ ‘ಸಾಮಾಜಿಕ ಬಹಿಷ್ಕಾರ’ ವಿವಾದ ಇದೀಗ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದೆ. ಕೆಲವು ಮಾಧ್ಯಮಗಳಲ್ಲಿ ಹನ್ನೆರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ವರದಿಗಳು ಪ್ರಸಾರವಾದ ಬೆನ್ನಲ್ಲೇ, ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸಂಘದ ಲೆಕ್ಕಪತ್ರಗಳ ವಿಷಯದಲ್ಲಿ ಉಂಟಾದ ಒಳಜಗಳವನ್ನೇ ಸಾಮಾಜಿಕ ಬಹಿಷ್ಕಾರ ಎಂದು ಬಿಂಬಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಮಾಜದ ಹಿರಿಯ ಮುಖಂಡರ ಹೇಳಿಕೆಯ ಪ್ರಕಾರ, ಸಾಮಾಜಿಕ ಬಹಿಷ್ಕಾರ ಎನ್ನುವುದು ಗ್ರಾಮೀಣ ಸಮಾಜದಲ್ಲಿ ತೀವ್ರ ಅರ್ಥ ಹೊಂದಿರುವ ಪದವಾಗಿದ್ದು, ನೀರು, ಆಹಾರ, ಉದ್ಯೋಗ ಹಾಗೂ ಜನಸಂಪರ್ಕದಿಂದ ದೂರ ಇಡುವಂತಹ ಕಠಿಣ ಕ್ರಮಗಳಿಗೆ ಮಾತ್ರ ಬಳಸಲಾಗುತ್ತದೆ. ಆದರೆ ತಮ್ಮ ಸಮಾಜದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ವ್ಯಕ್ತಿಗಳ ನಡುವೆ ವೈಯುಕ್ತಿಕ ವೈಮನಸ್ಸು ಅಥವಾ ಮಾತು ನಿಲ್ಲಿಸುವಂತಹ ಸಂದರ್ಭಗಳನ್ನು ಸಾಮಾಜಿಕ ಬಹಿಷ್ಕಾರ ಎಂದು ಕರೆಯುವುದು ತಪ್ಪು ಅಭಿಪ್ರಾಯ ಮೂಡಿಸುವಂತದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿವಾದದ ಹಿನ್ನೆಲೆ ಕುರಿತು ವಿವರಿಸಿದ ಮುಖಂಡರು, ಸದಾನಂದ ಪಾಣಿಭಾತಿ ಅವರು 2014ರಿಂದ 2017ರವರೆಗೆ ಸ್ವಕುಳ ಸಾಳಿ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ವೇಳೆ ನಡೆದ ಆಯ-ವ್ಯಯದ ಲೆಕ್ಕಪತ್ರಗಳನ್ನು ಕೇಳಿದ ಬಳಿಕವೇ ಸಮಸ್ಯೆ ತೀವ್ರಗೊಂಡಿತು ಎಂದು ತಿಳಿಸಿದ್ದಾರೆ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ನಡೆದ ವ್ಯವಹಾರಗಳ ಲೆಕ್ಕಪತ್ರಗಳನ್ನು ಸಮಾಜಕ್ಕೆ ಸಲ್ಲಿಸಲಾಗಿಲ್ಲ, ವಾಡಿಕೆಯ ಸಭೆಗಳನ್ನೂ ಕರೆದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದಾಗಿ ಹಣ ದುರುಪಯೋಗದ ಶಂಕೆಗಳು ಮೂಡಿದ್ದವು ಎಂದು ಹೇಳಲಾಗಿದೆ.

ಇದೇ ವಿಚಾರದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ, ಸದಾನಂದ ಪಾಣಿಭಾತಿ ಸೇರಿದಂತೆ ಸಿದ್ದಪ್ಪ ಧೋತ್ರೆ, ಗುರುನಾಥ ಶಿರವಾಳಕರ್‌, ಸೂರ್ಯಕಾಂತ ಪಿರಂಗಿ, ರಾಮಣ್ಣ ಶಿರವಾಳಕರ್‌, ಅನಿಲ ಮಾನು, ಘಂಟೆಪ್ಪ ಗುಂಡೆಗರ, ದೇವರಾಜ ಪಾಣಿಭಾತಿ, ದತ್ತಾತ್ರೇಯ ಪಿರಂಗಿ ಹಾಗೂ ಪವನಕುಮಾರ್‌ ಶಿರವಾಳಕರ್‌ ಅವರು ಜನವರಿ 23, 2026ರಂದು ತಮ್ಮನ್ನು ಸಮಾಜದಿಂದ ದೂರ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು. ಈ ದೂರನ್ನು ಜಿಲ್ಲಾಧಿಕಾರಿಗಳಿಗೂ ಹಾಗೂ ಪೋಲಿಸ್‌ ವರಿಷ್ಠಾಧಿಕಾರಿಗಳಿಗೂ ಸಲ್ಲಿಸಲಾಗಿದ್ದು, ಅದರ ಆಧಾರದ ಮೇಲೆ ಕೆಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು.

ಆದರೆ, ಈ ದೂರಿನಲ್ಲಿ ಸತ್ಯಾಸತ್ಯತೆ ಇಲ್ಲವೆಂದು ಸಮಾಜದ ಮತ್ತೊಂದು ವಲಯ ಹೇಳುತ್ತಿದೆ. ಸಂಬಂಧಿತ ಕುಟುಂಬಗಳು ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಇದ್ದಾರೆ, ಅವರ ಬದುಕಿನ ಹಕ್ಕುಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈಯುಕ್ತಿಕ ಕಾರ್ಯಕ್ರಮಗಳಿಗೆ ಕರೆಯುವುದು ಅಥವಾ ಕರೆಯದಿರುವುದು ವ್ಯಕ್ತಿಗತ ನಿರ್ಧಾರವಾಗಿದ್ದು, ಅದನ್ನು ಸಾಮಾಜಿಕ ಬಹಿಷ್ಕಾರವೆಂದು ಕರೆಯುವುದು ಸರಿಯಲ್ಲ ಎಂಬುದು ಅವರ ವಾದ.

ಈ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರದ ಮೇಲೂ ಅಸಮಾಧಾನ ವ್ಯಕ್ತವಾಗಿದ್ದು, ಮೊದಲಿಗೆ ಶಹಾಪೂರಿನ ಪ್ರಜಾವಾಣಿ ವಿಡಿಯೋ ರೂಪದಲ್ಲಿ ಸುದ್ದಿ ಪ್ರಸಾರ ಮಾಡಿದ ನಂತರ ಕೆಲವು ದೃಶ್ಯ ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡಿವೆ ಎಂದು ಮುಖಂಡರು ಆರೋಪಿಸಿದ್ದಾರೆ. ಶಹಾಪುರ ಬಸ್‌ ಠಾಣೆ ಹಾಗೂ ರಸ್ತೆಯ ದೃಶ್ಯಗಳನ್ನು ಹಿನ್ನೆಲೆ ಧ್ವನಿಯೊಂದಿಗೆ ಪ್ರಸಾರ ಮಾಡಿರುವುದರಿಂದ ವಿಷಯವು ಘನಘೋರ ಅಪರಾಧದಂತೆ ಕಾಣಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಬಹಿಷ್ಕಾರ ಎನ್ನುವ ಪದ ಬಳಕೆಯಿಂದ ತಮ್ಮ ಸಮಾಜದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಮುಖಂಡರು ಹೇಳಿದ್ದು, ಜಾತಿಯೊಳಗಿನ ಒಳಜಗಳವನ್ನು ಜಾತಿ–ಜಾತಿಗಳ ಮಧ್ಯೆ ನಡೆಯುವ ಗಂಭೀರ ಸಂಘರ್ಷದಂತೆ ತೋರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಸ್ವತಂತ್ರರಾಗಿರುವ ಸಂದರ್ಭದಲ್ಲಿ ಯಾರನ್ನೂ ಸಮಾಜದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ದೂರನ್ನು ಸಲ್ಲಿಸಿದವರ ವಾದದ ಪ್ರಕಾರ, ಕಳೆದ ಹಲವು ವರ್ಷಗಳಿಂದ ತಮ್ಮನ್ನು ಸಮಾಜದಿಂದ ದೂರ ಇಡಲಾಗುತ್ತಿದೆ ಹಾಗೂ ಬದುಕುವ ಹಕ್ಕುಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೋಲಿಸ್‌ ಇಲಾಖೆ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.

ಪ್ರಸ್ತುತ, ಆರೋಪ–ಪ್ರತ್ಯಾರೋಪಗಳ ನಡುವೆ ಸತ್ಯಾಸತ್ಯತೆ ಯಾವುದು ಎಂಬ ಪ್ರಶ್ನೆ ಉದ್ಭವಿಸಿದ್ದು, ಅಧಿಕೃತ ತನಿಖೆಯ ಬಳಿಕವೇ ಸ್ಪಷ್ಟತೆ ದೊರೆಯುವ ಸಾಧ್ಯತೆ ಇದೆ. ಸಾಮಾಜಿಕ ಬಹಿಷ್ಕಾರ ಎಂಬ ಗಂಭೀರ ಪದ ಬಳಕೆಯ ಕುರಿತು ಕೂಡ ಸಾಮಾಜಿಕ ವಲಯಗಳಲ್ಲಿ ಚರ್ಚೆ ಮುಂದುವರಿದಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ