ಲಕ್ನೋ, ಮೇ 3: ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ಸಂಬಂಧಿಯೊಬ್ಬ ಈ ಕೃತ್ಯ ಎಸಗಿದ್ದಾನೆ.
ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್‌ಗಂಜ್ ಗ್ರಾಮದಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಈ ಘಟನೆ ಶುಕ್ರವಾರ ಸಂಭವಿಸಿದೆ. ಸಂಬಂಧಿಕರು ಮತ್ತು ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದ ವೇಳೆ, ಧನೇಶ್ ಯಾದವ್ ಎಂಬಾತ ಮದ್ಯ ಸೇವಿಸುತ್ತಿದ್ದನು.
ಈ ವೇಳೆ ಮದ್ಯಕ್ಕೆ ನೀರು ತರುವಂತೆ ಅಲ್ಲಿದ್ದ ಬಾಲಕನಿಗೆ ಹೇಳಿದ್ದಾನೆ. ಆದರೆ ಬಾಲಕ ನಿರಾಕರಿಸಿದ ಹಿನ್ನೆಲೆ ಕೋಪಗೊಂಡ ಆರೋಪಿ ತನ್ನ ಬಳಿಯಿದ್ದ ಬಂದೂಕಿನಿಂದ ಬಾಲಕನ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದಿನಿಂದ ಸಮಾರಂಭದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿತ್ತು.
ತೀವ್ರ ಗಾಯಗೊಂಡ ಬಾಲಕನನ್ನು ತಕ್ಷಣ ಕಾಸ್ಗಂಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಲಿಗಢಕ್ಕೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬಾಲಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಂತರ ಪರಾರಿಯಾಗಿದ್ದ ಆರೋಪಿ ಧನೇಶ್ ಯಾದವ್ ಅನ್ನು ಪೊಲೀಸರು ಖಿತೌಲಿ ಕಾಲುವೆ ಸೇತುವೆ ಬಳಿ ಬಂಧಿಸಿದ್ದು, ಅಪರಾಧಕ್ಕೆ ಬಳಸಿದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ಮುಂದುವರಿದಿದೆ.
ಈ ದಾರುಣ ಘಟನೆ ಗ್ರಾಮದಲ್ಲಿ ಆಘಾತ ಮತ್ತು ಆತಂಕ ಮೂಡಿಸಿದೆ.