ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ಜಾತ್ರೆ: ಪೂರ್ವ ತಯಾರಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು
ಸುರಪುರ:
ಸುರಪುರ ತಾಲೂಕಿನ ಸುಕ್ಷೇತ್ರ ತಿಂಥಣಿಯ ಶ್ರೀ ಜಗದ್ಗುರು ಮೌನೇಶ್ವರ ಜಾತ್ರೆಯ ಅಂಗವಾಗಿ ಇಂದು ಮಾನ್ಯ ಜಿಲ್ಲಾಧಿಕಾರಿಗಳು, ಯಾದಗಿರಿ ಮಾನ್ಯ ಸಹಾಯಕ ಆಯುಕ್ತರು ಹಾಗೂ ಸುರಪುರದ ಮಾನ್ಯ ತಹಶೀಲ್ದಾರರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಜಾತ್ರೆಯ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿದರು.
ಜಾತ್ರೆ ಸಂದರ್ಭದಲ್ಲಿ ನದಿಯ ದಂಡೆಯ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಸ ಎಸೆಯದಂತೆ ಹಾಗೂ ಬಟ್ಟೆ ತೊಳೆಯದಂತೆ ನಿಗಾ ವಹಿಸಲು ಕೆಲಸಗಾರರನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೌನೇಶ್ವರ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಿರುವ ಯಾತ್ರೆ ನಿವಾಸವನ್ನು ವೀಕ್ಷಿಸಿ ಅದನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವಂತೆ ತಿಳಿಸಿದರು.
ಯಾತ್ರೆ ನಿವಾಸದ ಪಕ್ಕದಲ್ಲಿ ಅನಧಿಕೃತವಾಗಿ ಅತಿಕ್ರಮಣ ಮಾಡಿ ನಿರ್ಮಿಸಿರುವ ಕಂಪೌಂಡ್ ಜಾತ್ರೆಗೆ ಹಾಗೂ ಬಸ್ ನಿಲ್ದಾಣದ ಮೂಲಕ ಸಂಚರಿಸುವ ಭಕ್ತರಿಗೆ ತೊಂದರೆ ಉಂಟುಮಾಡುತ್ತಿರುವುದರಿಂದ ತಕ್ಷಣ ತೆರವುಗೊಳಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದರು.
ಜಾತ್ರೆಗೆ ಅಗತ್ಯವಿರುವ ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಲು ಸ್ಥಳ ವೀಕ್ಷಣೆ ನಡೆಸಿದರು. ದೇವಸ್ಥಾನದ ಮುಂಭಾಗದಲ್ಲಿ ಯಾವುದೇ ಅಂಗಡಿಗಳನ್ನು ಹಾಕದಂತೆ ಸೂಚಿಸಿದರು. ಲೈಟಿಂಗ್ ವ್ಯವಸ್ಥೆ, ಕಲ್ಲು ಸಕ್ಕರೆ ಸೇರಿದಂತೆ ಇತರೆ ಎಲ್ಲಾ ಟೆಂಡರ್‌ಗಳನ್ನು ನಿಯಮಾನುಗುಣವಾಗಿ ನಡೆಸಬೇಕು ಹಾಗೂ ಭಕ್ತಾದಿಗಳು–ವ್ಯಾಪಾರಸ್ಥರಿಗೆ ತೊಂದರೆ ಆಗಬಾರದು ಎಂದು ತಾಕೀತು ಮಾಡಿದರು.
ಈ ವರ್ಷ ಜಾತ್ರೆಯನ್ನು ಅತ್ಯಾಕರ್ಷಕವಾಗಿ ಆಚರಿಸಲು ಜೀರೋ ಬಲ್ಬ್, ಎಲ್‌ಇಡಿ ಹಾಗೂ ಮರ್ಕ್ಯೂರಿ ಬಲ್ಬ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು ಸೂಚಿಸಿದರು. ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು, ಟ್ರಾಫಿಕ್ ವ್ಯವಸ್ಥೆ ಸುಗಮವಾಗಿರಬೇಕು ಹಾಗೂ ಕಳ್ಳತನ ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹೇಳಿದರು.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ದಾಸೋಹಗಳು ಹಾಗೂ ಭಕ್ತಾದಿಗಳಿಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಜಾತ್ರೆ ಸಮಯದಲ್ಲಿ ನಾರಾಯಣಪುರ ಡ್ಯಾಂನಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಆಡಳಿತ, ಮಠದ ಅಧಿಕಾರಿಗಳು ಹಾಗೂ ಸ್ಥಳೀಯರು ಸಹಕರಿಸಬೇಕು. ವಿಜ್ರಮಣೆಯಿಂದ ಜಾತ್ರೆ ಆಚರಿಸಲು ಜಿಲ್ಲಾ ಆಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ್, ಕೆಐಡಿಬಿ ಅಧಿಕಾರಿಗಳು, ಸುರಪುರ ಪೊಲೀಸ್ ಠಾಣೆಯ ಪಿಐ ಉಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.