ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಶಾಂತಪುರ ಗ್ರಾಮದ ಬಳಿ ಶ್ರೀರಂಗಪಟ್ಟಣ–ಬೀದರ್ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಒಂಬತ್ತು ಮಂದಿ ಸಜೀವ ದಹನವಾಗಿರುವ ದುರ್ಘಟನೆ ನಡೆದಿದೆ.
ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಎರಡೂ ವಾಹನಗಳು ಬೆಂಕಿಗಾಹುತಿಯಾದವು. ಪರಿಣಾಮ ಕಾರಿನೊಳಗೆ ಸಿಲುಕಿದ್ದವರು ಹೊರಬರಲು ಸಾಧ್ಯವಾಗದೆ ಸ್ಥಳದಲ್ಲೇ ದಹನಗೊಂಡಿದ್ದಾರೆ.
ಮೃತರನ್ನು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಕೃಷ್ಣ ನಾಯಕ (52), ಅನಂತಕಲಾ ಕೃಷ್ಣ ನಾಯಕ (45), ಶರಣಪ್ಪ (36), ನಿಸರ್ಗ (30), ಸಿದ್ದಾರ್ಥ (3), ಅಧ್ವಿಕಾ (5), ಶ್ರೀನಿಧಿ (1.5), ಶಶಿಕಲಾ, ವಿರಾಟ್ಎಂದು ಗುರುತಿಸಲಾಗಿದೆ. ಇವರು ಸುರಪುರದ ಗೋಪಾಲಸ್ವಾಮಿ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇನ್ನೊಂದೆಡೆ, ವಿಆರ್‌ಎಲ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಸಾಗುತ್ತಿತ್ತು. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತದ ತಕ್ಷಣವೇ ವಾಹನಗಳಿಗೆ ಬೆಂಕಿ ತಗುಲಿದ್ದು, ಕಾರು ಸಂಪೂರ್ಣ ಜಖಂಗೊಂಡ ಕಾರಣ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಇಬ್ಬರು ಮಕ್ಕಳನ್ನು ಹೊರತೆಗೆದರೂ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಮೃತದೇಹಗಳು ಗುರುತಿಸಲು ಕಷ್ಟವಾಗುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಉಪಾಧೀಕ್ಷಕ ಜಾವೇದ್ ಇನಂದಾರ್ ಹಾಗೂ ಪಿಐ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಪುರ ಶಾಸಕ ರಾಜಾವೇಣುಗೋಪಾಲ ನಾಯಕರು ಸಹ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
ರಸ್ತೆ ಸ್ಥಿತಿಗೆ ಸ್ಥಳೀಯರ ಆಕ್ರೋಶ
ಘಟನೆ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿ ಬದಲಾಗಿದೆ. ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳು ಇರುವುದರಿಂದ ವಾಹನ ಚಾಲಕರು ತಪ್ಪಿಸುವ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷವೂ ಇದೇ ರಸ್ತೆಯಲ್ಲಿ ಅಪಘಾತಕ್ಕೆ ನಾಲ್ವರು ಬಲಿಯಾಗಿದ್ದರು,” ಎಂದು ಹೇಳಿದ್ದಾರೆ.
“ರಾಜಕಾರಣಿಗಳು ಕೇವಲ ಸಂತಾಪ ಸೂಚಿಸುತ್ತಾರೆ, ಆದರೆ ಶಾಶ್ವತ ಪರಿಹಾರ ಕಂಡು ಹಿಡಿಯುವುದಿಲ್ಲ. ರಸ್ತೆ ನಿರ್ವಹಣೆ ಕೊರತೆ ಮತ್ತು ಭ್ರಷ್ಟಾಚಾರವೇ ಇಂತಹ ಘಟನೆಗಳಿಗೆ ಕಾರಣ,” ಎಂದು ಅವರು ಆರೋಪಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ
ಈ ರೀತಿಯ ದುರ್ಘಟನೆಗಳು ಮರುಕಳಿಸದಂತೆ ರಸ್ತೆ ದುರಸ್ತಿ, ಸುರಕ್ಷತಾ ಕ್ರಮಗಳು ಮತ್ತು ಕಠಿಣ ನಿಯಂತ್ರಣಗಳನ್ನು ಜಾರಿಗೆ ತರಬೇಕು ಎಂದು ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.