ಯಾದಗಿರಿ: ಯಾದಗಿರಿ ಜಿಲ್ಲೆಯ ವರ್ಕನಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲಿನ ಕ್ವಾರಿಗಳ ಅತಿರೇಕದ ಬ್ಲಾಸ್ಟಿಂಗ್ ಗ್ರಾಮಸ್ಥರ ನಿತ್ಯಜೀವನವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಸುತ್ತಮುತ್ತಲಿನ ಗುಡ್ಡಗಳನ್ನು ನಿರಂತರವಾಗಿ ಸ್ಫೋಟಿಸಲಾಗುತ್ತಿದ್ದು, ಗ್ರಾಮ ಸಂಪೂರ್ಣವಾಗಿ ಧೂಳು ಮತ್ತು ಭೀತಿಯ ವಾತಾವರಣಕ್ಕೆ ಸಿಲುಕಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಬ್ಲಾಸ್ಟಿಂಗ್‌ನಿಂದ ಹಾರಿ ಬರುವ ಕಲ್ಲುಗಳು ಹಾಗೂ ದಟ್ಟ ಧೂಳಿನಿಂದ ಗ್ರಾಮಸ್ಥರ ಜೀವಕ್ಕೆ ಅಪಾಯ ಎದುರಾಗಿದ್ದು, ಮನೆಮನೆಗಳ ಮುಂದೆ ಕಲ್ಲಿನ ಧೂಳು ತುಂಬಿಕೊಂಡಿದೆ. ರೈತರ ಹೊಲಗಳಲ್ಲಿ ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ ಸುಮಾರು 100ರಿಂದ 200 ಟಿಪ್ಪರ್‌ಗಳ ನಿರಂತರ ಓಡಾಟದಿಂದ ಗ್ರಾಮ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
“ನಾಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಕ್ವಾರಿ ಮಾಲೀಕರು ಹಾಗೂ ಜಿಲ್ಲಾಡಳಿತದ್ದೇ” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಈ ಗಂಭೀರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ, ವರ್ಕನಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳುಬೆಲಿ ಹಾಕಿ ಬೀಗ ಜಡಿದು ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರ್ಕನಳ್ಳಿ ಗ್ರಾಮ ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು ಎಂಟು–ಹತ್ತು ಕಿಲೋಮೀಟರ್ ದೂರದಲ್ಲಿದ್ದು, ಇಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಕ್ವಾರಿ ದಂದೆಯ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಭಾರೀ ಗಾತ್ರದ ಲಾರಿಗಳ ನಿರಂತರ ಸಂಚಾರದಿಂದ ರಸ್ತೆ ದುಸ್ಥಿತಿಗೆ ತಲುಪಿದ್ದು, ರಸ್ತೆ ಹದಗೆಟ್ಟ ಪರಿಣಾಮ ಉಂಟಾಗುತ್ತಿರುವ ವಿಪರೀತ ಧೂಳು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಲ್ಲು ಕ್ವಾರಿ ಹಾಗೂ ಬೆಟ್ಟದ ಸ್ಫೋಟಗಳಿಂದ ಜನಜೀವನ ನರಕದಂತಾಗಿದೆ ಎಂಬುದು ಸ್ಥಳೀಯರ ಅಳಲು.
ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕಲ್ಲು ಕ್ವಾರಿ ಬ್ಲಾಸ್ಟಿಂಗ್ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಹಾಗೂ ಗ್ರಾಮಸ್ಥರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ಗ್ರಾಮಸ್ಥರು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.