Press ID & Credential Portal
Apply / Verify  ➔
LIVE TV LocalCrimeNationalInternationalPoliticsFinancialEducationTechnologyEntertainmentSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮತದಾರರ ಹೆಸರು ಅಳಿಸುವಂತಿಲ್ಲ: ಚುನಾವಣಾ ಆಯೋಗಕ್ಕೆ ಹೈಕೋರ್ಟ ತರಾಟೆ

ಪಣಜಿ, ಅ. 1 : ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)ಯ ಕರಡು ಮತದಾರರ ಪಟ್ಟಿಯನ್ನೇ ಆಧಾರವಾಗಿಟ್ಟುಕೊಂಡು, ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಈಗಾಗಲೇ ನೋಂದಾಯಿತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತಿಲ್ಲ ಎಂದು ಬಾಂಬೆ ಹೈಕೋರ್ಟನ ಗೋವಾ ಪೀಠ ಚುನಾವಣಾ ಆಯೋಗಕ್ಕೆ ಸ್ಪಷ್ಟವಾಗಿ ಹೇಳಿದೆ. ಆಡಳಿತಾತ್ಮಕ ಸಾಫ್ಟ್‌ವೇರ್ ವ್ಯವಸ್ಥೆಯು ಶಾಸನಬದ್ಧ ಕಾನೂನನ್ನು ಮೀರುವಂತಿಲ್ಲ ಎಂದೂ ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಅಮಿತ್ ಎಸ್. ಜಾಮ್ಸಂದೇಕರ್ ಮತ್ತು ವಾಲ್ಮೀಕಿ ಮೆನೆಜಸ್ ಅವರ ವಿಭಾಗೀಯ ಪೀಠ, ಮತದಾರರ ಅರ್ಜಿಗಳನ್ನು ತಿರಸ್ಕರಿಸಲು ‘ಇರೋನೆಟ್‌’ ಸಾಫ್ಟ್‌ವೇರ್ ವ್ಯವಸ್ಥೆಯನ್ನೇ ಅವಲಂಬಿಸಿರುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾಫ್ಟ್‌ವೇರ್‌ನಲ್ಲಿ ಅರ್ಜಿಯನ್ನು ‘ತಿರಸ್ಕರಿಸುವ’ ಆಯ್ಕೆ ಮಾತ್ರ ಇತ್ತು ಎಂಬ ಚುನಾವಣಾ ಆಯೋಗದ ವಿವರಣೆಯನ್ನೂ ಪೀಠ ಪ್ರಶ್ನಿಸಿದೆ.

ಗೋವಾದ ಸಾಂತಾ ಕ್ರೂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದ ಪರೇಶ್ ಸಾಲ್ಗಾಂವ್ಕರ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಕುಟುಂಬದ ಸದಸ್ಯರು ಹೊಸ ಮತದಾರರಾಗಿರಲಿಲ್ಲ; ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿದ್ದರು. ವಿಳಾಸ ಬದಲಾವಣೆಗಾಗಿ ಬೂತ್ ಮಟ್ಟದ ಅಧಿಕಾರಿಯ ಸೂಚನೆಯಂತೆ ಅವರು ನಮೂನೆ–8 ಸಲ್ಲಿಸಿದ್ದರು.

ಆದರೆ ಅರ್ಜಿಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಅವರ ಮತದಾರರ ಗುರುತಿನ ಚೀಟಿ (ಇಪಿಐಸಿ) ದಾಖಲೆಗಳು ಚುನಾವಣಾ ನೋಂದಣಿ ಅಧಿಕಾರಿಗಳ ಜಾಲವಾದ ‘ಇರೋನೆಟ್‌’ನಲ್ಲಿ ಕಾಣಿಸಲಿಲ್ಲ. ಇದರಿಂದ ಸಾಫ್ಟ್‌ವೇರ್‌ನಲ್ಲಿ ಅರ್ಜಿಯನ್ನು ತಿರಸ್ಕರಿಸುವ ಆಯ್ಕೆ ಮಾತ್ರ ಲಭ್ಯವಿತ್ತು ಎಂದು ಚುನಾವಣಾ ಆಯೋಗದ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಬಳಿಕ ಕುಟುಂಬದ ಸದಸ್ಯರಿಗೆ ನಮೂನೆ–6 ಸಲ್ಲಿಸಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಅರ್ಜಿದಾರರು, ತಾವು ಹೊಸ ಮತದಾರರಲ್ಲ; ಅದೇ ವಿಧಾನಸಭಾ ಕ್ಷೇತ್ರದೊಳಗೆ ಮನೆ ಬದಲಾಯಿಸಿರುವುದರಿಂದ ವಿಳಾಸ ಬದಲಾವಣೆಗೆ ನಮೂನೆ–8 ಸಲ್ಲಿಸಿದ್ದೇವೆ ಎಂದು ವಾದಿಸಿದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ, ಈಗಾಗಲೇ ನೋಂದಾಯಿತ ಮತದಾರರನ್ನು ಸಾಫ್ಟ್‌ವೇರ್ ಕಾರಣದಿಂದ ಹೊಸ ಮತದಾರರಂತೆ ಪರಿಗಣಿಸುವ ಕ್ರಮದ ಬಗ್ಗೆ ಪ್ರಶ್ನೆ ಎತ್ತಿತು. ಎಸ್‌ಐಆರ್‌ ಕರಡು ಪಟ್ಟಿಯನ್ನೇ ಹೆಸರು ಅಳಿಸುವುದಕ್ಕೆ ಆಧಾರ ಮಾಡಿಕೊಂಡು, ಬಳಿಕ ಮತ್ತೆ ನಮೂನೆ–6 ಮೂಲಕ ಹೊಸ ಮತದಾರರಂತೆ ಅರ್ಜಿ ಸಲ್ಲಿಸುವಂತೆ ಸೂಚಿಸುವುದಾದರೆ ನಮೂನೆ–6, 7 ಮತ್ತು 8ರ ಶಾಸನಬದ್ಧ ಉದ್ದೇಶವೇ ಅರ್ಥ ಕಳೆದುಕೊಳ್ಳುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

‘ವಿಚಾರಣೆ ಇಲ್ಲದೆ ಹೆಸರು ಅಳಿಸಲು ಯಾವ ಕಾನೂನಿನಲ್ಲಿ ಅಧಿಕಾರವಿದೆ?’

ಮತದಾರರ ಪಟ್ಟಿಯಿಂದ ವ್ಯಕ್ತಿಯ ಹೆಸರನ್ನು ತೆಗೆದುಹಾಕುವ ಮೊದಲು ಸಂಬಂಧಪಟ್ಟವರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡದೆ ಕ್ರಮ ಕೈಗೊಳ್ಳಲು ಯಾವ ಕಾನೂನು ಅವಕಾಶ ನೀಡುತ್ತದೆ ಎಂಬುದನ್ನು ನ್ಯಾಯಾಲಯ ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸಿತು. ಹೆಸರು ಅಳಿಸುವ ಮೊದಲು ಮತದಾರರಿಗೆ ವಿಚಾರಣೆಯ ಅವಕಾಶ ನೀಡಬೇಕು ಎಂಬ ಅಂಶವನ್ನು ಪೀಠ ಒತ್ತಿಹೇಳಿತು.

ಅಧಿಕಾರಿಗಳು ತಮ್ಮ ಸ್ವತಂತ್ರ ವಿವೇಚನೆ ಬಳಸುವ ಬದಲು ಸಾಫ್ಟ್‌ವೇರ್ ನೀಡುವ ಆಯ್ಕೆಯನ್ನೇ ಅಂತಿಮವೆಂದು ಪರಿಗಣಿಸಿರುವುದರ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಸಾಫ್ಟ್‌ವೇರ್ ವ್ಯವಸ್ಥೆ ಕಾನೂನಿಗಿಂತ ಮೇಲಲ್ಲ; ತಂತ್ರಾಂಶದ ಮಿತಿಯಿಂದಾಗಿ ಕಾನೂನುಬದ್ಧ ಹಕ್ಕು ಅಥವಾ ಪ್ರಕ್ರಿಯೆಯನ್ನು ಬದಿಗಿಡಲಾಗದು ಎಂಬುದು ನ್ಯಾಯಾಲಯದ ನಿಲುವಾಗಿದೆ.

ನಮೂನೆ–8 ಅರ್ಜಿ ಸಲ್ಲಿಕೆಯಾದಾಗ ಸಂಬಂಧಪಟ್ಟ ಮತದಾರ ನಿಜವಾಗಿಯೂ ನಿವಾಸ ಬದಲಾಯಿಸಿದ್ದಾರೆಯೇ ಎಂಬುದನ್ನು ಚುನಾವಣಾ ಅಧಿಕಾರಿಗಳು ಸ್ವತಂತ್ರವಾಗಿ ಪರಿಶೀಲಿಸಬೇಕು. ಸಾಫ್ಟ್‌ವೇರ್‌ನಲ್ಲಿ ನಿರ್ದಿಷ್ಟ ಆಯ್ಕೆ ಇಲ್ಲ ಎಂಬ ಕಾರಣವೊಂದರಿಂದಲೇ ಅರ್ಜಿಯನ್ನು ತಿರಸ್ಕರಿಸುವುದು ಸರಿಯಲ್ಲ ಎಂಬುದನ್ನು ಪೀಠ ಸ್ಪಷ್ಟಪಡಿಸಿದೆ.

ಇಂತಹ ಸಮಸ್ಯೆ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿರದೇ, ನಿವಾಸ ಬದಲಾಯಿಸಿರುವ ಇನ್ನೂ ಅನೇಕ ಮತದಾರರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ತಾಂತ್ರಿಕ ವ್ಯವಸ್ಥೆಯ ಕಾರಣದಿಂದ ದೊಡ್ಡ ಸಂಖ್ಯೆಯ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ಉಂಟಾಗಬಾರದು ಎಂಬುದನ್ನು ಪೀಠ ಒತ್ತಿಹೇಳಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಸೆಂಬರ್ 7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸಾಧ್ಯತೆಎಂಎಸ್‌ಪಿ ಆಧರಿಸಿ ಕಬ್ಬಿಗೆ ದರ: ಡಿ.ಕೆ. ಶಿವಕುಮಾರಮತದಾರರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿಚುನಾವಣಾ ಆಯೋಗದ ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶಸಚಿವ ಜಿ. ಪರಮೇಶ್ವರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು‘ಬಟ್ಟೆ ಹರಿದು ರಕ್ತಸ್ರಾವವಾಗಿತ್ತು’: ಟ್ರಂಪ್ ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ ಅತ್ಯಾಚಾರ ಆರೋಪ!ಮತದಾರರ ಪಟ್ಟಿಯಿಂದ 1 ಕೋಟಿ ಹೆಸರು ಡಿಲೀಟ್!ಕಬ್ಬಿನ ದರ ನಿಗದಿ ಸಭೆಯಲ್ಲಿ ರೈತ ಮುಖಂಡರ ಮಾರಾಮಾರಿ: ಸುವರ್ಣಸೌಧದಲ್ಲೇ ಕೈಕೈ ಮಿಲಾಯಿಸಿದ ಎರಡು ಬಣಗಳು!ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಡಿ.ಕೆ. ಶಿವಕುಮಾರಜಲವಿದ್ಯುತ್ ಯೋಜನೆ ವಿರೋಧಿಸಿ ಅರುಣಾಚಲದಲ್ಲಿ ಹಿಂಸಾಚಾರ: ಭದ್ರತಾ ಪಡೆಯ ಎರಡು ತುಕಡಿ ರವಾನೆ