ಇತ್ತೀಚಿನ ದಿನಗಳಲ್ಲಿ ಸುರಪುರ ಮತಕ್ಷೇತ್ರದ ರಾಜಕೀಯ ವಾತಾವರಣದಲ್ಲಿ ಉದ್ದೇಶಪೂರ್ವಕ ಅಪಪ್ರಚಾರಕ್ಕೆ ವೇದಿಕೆ ಸಿದ್ಧವಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ರಾಜಾ ವೆಂಕಟಪ್ಪ ನಾಯಕ ಧಣಿಯವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಸಿಂಪತಿ ರಾಜಕೀಯದ ಮುಖವಾಡ ಹಾಕಿ, ಸುರಪುರ ಮತಕ್ಷೇತ್ರದ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಧಣಿಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹರಡಲಾಗುತ್ತಿದೆ. ಇಂತಹ ಪ್ರಯತ್ನಗಳು ಜನರನ್ನು ಗೊಂದಲಕ್ಕೆ ತಳ್ಳುವ ದುರುದ್ದೇಶ ಹೊಂದಿದ್ದರೂ, ಕ್ಷೇತ್ರದ ಪ್ರಜ್ಞಾವಂತ ಜನತೆಗೆ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಅರಿಯುವ ಸಾಮರ್ಥ್ಯವಿದೆ.
ಹಿನ್ನಲೆ: 2023ರ ಚುನಾವಣೆಯ ಸತ್ಯ
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಾ ವೆಂಕಟಪ್ಪ ನಾಯಕ ಧಣಿಯವರು ಕೆಲವೊಬ್ಬರನ್ನು ಕೆಲವು ಸ್ಪಷ್ಟ ಕಾರಣಗಳಿಂದ ದೂರವಿಟ್ಟಿದ್ದರು. ಆ ಕಾರಣಗಳು ವೈಯಕ್ತಿಕವಾಗಿರಲಿ ಅಥವಾ ರಾಜಕೀಯವಾಗಿರಲಿ, ಅವು ಕ್ಷೇತ್ರದ ಜನತೆಗೆ ಈಗಾಗಲೇ ತಿಳಿದಿರುವ ವಿಷಯಗಳಾಗಿವೆ. ಆದರೆ ಇಂದು, ಅದೇ ವಿಷಯವನ್ನು ಮರೆತು, ಹಿಂದಿನ ಒಡನಾಟಗಳನ್ನು ನೆಪ ಮಾಡಿಕೊಂಡು ಅಪಪ್ರಚಾರ ನಡೆಸುತ್ತಿರುವುದು ರಾಜಕೀಯದ ನೈತಿಕ ದೌರ್ಬಲ್ಯವನ್ನು ಬಹಿರಂಗಪಡಿಸುತ್ತದೆ.
ಸುರಪುರ ರಾಜಕಾರಣದಲ್ಲಿ ರಾಜಾ ವೆಂಕಟಪ್ಪ ನಾಯಕ ಧಣಿಯವರು ಯಾವತ್ತೂ ಎಲ್ಲಾ ಸಮುದಾಯದ ಜನರೊಂದಿಗೆ ಸಮನ್ವಯದಿಂದ ನಡೆದುಕೊಂಡವರು ಎಂಬುದು ಇತಿಹಾಸ. ಅದೇ ಪರಂಪರೆಯಂತೆ ಇಂದು ರಾಜಾ ವೇಣುಗೋಪಾಲ ನಾಯಕ ಧಣಿಯವರು ಕೂಡ ಯಾವುದೇ ಸಮುದಾಯ ಭೇದವಿಲ್ಲದೆ, ಎಲ್ಲರ ವಿಶ್ವಾಸ ಗಳಿಸಿಕೊಂಡು ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜನಬೆಂಬಲವೇ ಅಪಪ್ರಚಾರದ ಬೇರು ಕತ್ತರಿಸಿದೆ
ರಾಜಾ ವೇಣುಗೋಪಾಲ ನಾಯಕ ಧಣಿಯವರು ಸುರಪುರ ಮತಕ್ಷೇತ್ರದ ಎಲ್ಲಾ ಸಮುದಾಯಗಳ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಜನಬೆಂಬಲವನ್ನು ಸಹಿಸಲಾಗದೆ, ಕೆಲವೊಬ್ಬರು ಬೇರೆವರ ಮಾತಿಗೆ ಮರುಳಾಗಿ, ಹಿಂದಿನ ಎಲ್ಲಾ ಒಡನಾಟಗಳನ್ನು ಮರೆತು, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ರಾಜಕೀಯ ಅಪಪ್ರಚಾರವಾಗಿ ಪರಿವರ್ತಿಸುತ್ತಿದ್ದಾರೆ.
ಸತ್ಯವೇನೆಂದರೆ, ಯಾವ ಶಾಸಕರಿಗೂ ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕವಾಗಿ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ, ಜನತೆಗೆ ನೀಡಿದ ಭರವಸೆಗಳ ಅನುಷ್ಠಾನದಲ್ಲಿ ಪ್ರಾಮಾಣಿಕತೆ ತೋರಿಸುವುದೇ ನಿಜವಾದ ನಾಯಕತ್ವ. ಈ ಅಂಶದಲ್ಲಿ ರಾಜಾ ವೇಣುಗೋಪಾಲ ನಾಯಕ ಧಣಿಯವರು ಕೊಟ್ಟ ಮಾತಿನಂತೆ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅಭಿವೃದ್ಧಿಯ ಅಂಕಿ-ಅಂಶಗಳೇ ಉತ್ತರ
ಸುರಪುರ ಮತಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ಸಾರ್ವಜನಿಕ ಸೌಲಭ್ಯಗಳ ವಿಸ್ತರಣೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಸಮಾಜ ಕಲ್ಯಾಣ ಯೋಜನೆಗಳು – ಈ ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿರುವಾಗ, ವೈಯಕ್ತಿಕ ಅಸಮಾಧಾನ ಹೊಂದಿರುವ ಕೆಲವರಿಗೆ ಅದು ಅಸಹನೀಯವಾಗುವುದು ಸಹಜ. ಆ ಅಸಹನೆಯನ್ನು ಅಪಪ್ರಚಾರದ ರೂಪದಲ್ಲಿ ಹೊರಹಾಕುವುದು ಮಾತ್ರ ರಾಜಕೀಯ ಸಂಸ್ಕೃತಿಗೆ ವಿರುದ್ಧ.
ಸಾಮಾಜಿಕ ಜಾಲತಾಣ: ಜವಾಬ್ದಾರಿ ಬೇಕು
ಇತ್ತೀಚೆಗೆ ಕೆಲವೊಂದು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು, ಶಾಸಕರ ವಿರುದ್ಧ ವಿಡಿಯೋಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಸುರಪುರ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ರಾಜಾ ವೆಂಕಟಪ್ಪ ನಾಯಕ ಧಣಿಯವರ ಕುಟುಂಬದ ಹೆಸರನ್ನು ಬಳಸಿಕೊಳ್ಳುವ ನೈತಿಕ ಹಕ್ಕೂ ಅವರಿಗೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.
ಸಾಮಾಜಿಕ ಜಾಲತಾಣಗಳು ಜನತಂತ್ರದ ಬಲವಾದ ಮಾಧ್ಯಮಗಳಾಗಬೇಕು; ಅಪಪ್ರಚಾರದ ಅಸ್ತ್ರವಾಗಬಾರದು.
ನಿಷ್ಠಾವಂತ ರಾಜಕೀಯ ಸಂಸ್ಕೃತಿ
ರಾಜಾ ವೇಣುಗೋಪಾಲ ನಾಯಕ ಸಾಹೇಬರು ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಹಿರಿಯ ಮುಖಂಡರನ್ನು ಯಾವತ್ತೂ ಮರೆತಿಲ್ಲ. ನಿಷ್ಠಾವಂತ ಕಾರ್ಯಕರ್ತರ ಸಂಸ್ಕೃತಿ ಎಂದಿಗೂ ಹಿಂದಿನಿಂದ ಚೂರಿ ಹಾಕುವದಾಗಿರದು. ಸಣ್ಣಪುಟ್ಟ ವಿಚಾರಗಳಿದ್ದರೆ ಮುಖಾಮುಖಿಯಾಗಿ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ನಿಷ್ಠಾವಂತ ರಾಜಕೀಯದ ಗುರುತು.
ರಾಜಾ ವೇಣುಗೋಪಾಲ ನಾಯಕ ಧಣಿಯವರು ಹಾಗೂ ಅವರ ನಾಲ್ವರು ಸಹೋದರರು ಯಾವ ಮೌಲ್ಯಗಳನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದಾರೆ ಎಂಬುದು ಸುರಪುರದ ನಿಷ್ಠಾವಂತ ಜನತೆಗೆ ಚೆನ್ನಾಗಿ ಗೊತ್ತಿದೆ.
ಜನತೆ ಅಂತಿಮ ತೀರ್ಪುಗಾರರು
ಅಪಪ್ರಚಾರದ ರಾಜಕೀಯಕ್ಕೆ ಸುರಪುರ ಮತಕ್ಷೇತ್ರದ ಜನತೆ ಯಾವತ್ತೂ ಮನ್ನಣೆ ಕೊಟ್ಟಿಲ್ಲ. ಇತಿಹಾಸದಲ್ಲಿಯೂ ಕೊಡಿಲ್ಲ, ಮುಂದೆಯೂ ಕೊಡೋದಿಲ್ಲ. ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ. ಸತ್ಯ, ಸೇವೆ ಮತ್ತು ಅಭಿವೃದ್ಧಿಯೇ ಸದಾ ಗೆಲ್ಲುವ ಮೌಲ್ಯಗಳು.
ಸುರಪುರದ ರಾಜಕೀಯ ದಿಕ್ಕು ಸ್ಪಷ್ಟವಾಗಿದೆ. ಅದು ದ್ವೇಷದ ರಾಜಕೀಯವಲ್ಲ, ಅಭಿವೃದ್ಧಿಯ ರಾಜಕೀಯ. ಅಪಪ್ರಚಾರದ ಶಬ್ದಗಳು ಕ್ಷಣಿಕವಾಗಿರಬಹುದು; ಆದರೆ ಜನನಂಬಿಕೆಯ ಮೌಲ್ಯ ಶಾಶ್ವತ.