ಯಾದಗಿರಿ | ಮೇ 15: ಯಾದಗಿರಿಯಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ. ಲ್ಯಾಬ್‌ಗೆ ಹಾಕಲಾಗಿದ್ದ ಲಾಕ್‌ನ ಕೀ ಹಸ್ತಾಂತರ ಮಾಡುವ ಸಂಬಂಧ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ.
ಶ್ರೀ ಸಾಯಿ ರಾಮ್ ಡಯಾಗ್ನೋಸ್ಟಿಕ್ ಲ್ಯಾಬ್‌ನ ರಾಹುಲ್ ಸಾಬಣ್ಣ ಕೊಳ್ಳೂರು ನೀಡಿದ ದೂರಿನ ಮೇರೆಗೆ ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆ ಅಧಿಕಾರಿಗಳು ದಾಳಿ ನಡೆಸಿದರು. ದೂರಿನ ಪ್ರಕಾರ, ಲ್ಯಾಬ್‌ಗೆ ಹಾಕಲಾಗಿದ್ದ ಲಾಕ್‌ನ ಕೀ ಹಸ್ತಾಂತರ ಮಾಡುವುದಕ್ಕಾಗಿ ಅಧಿಕಾರಿಗಳು ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿ ಸುಗುರೆಪ್ಪ ಅಲಿಯಾಸ್ ತಿಪ್ಪಣ್ಣ ಕವಲಿ ಹಾಗೂ ಬೆಟದೂರು ಆಸ್ಪತ್ರೆಯ ಲ್ಯಾಬ್ ತಂತ್ರಜ್ಞ ಸಂತೋಷ್ ಶರಣಪ್ಪಗೌಡ ಮಾಲಿಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ರೂಪಿಸಿದ ಉರುಳಿಯಲ್ಲಿ ಆರೋಪಿಗಳಲ್ಲಿ ಒಬ್ಬರು ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆಯ ಬಳಿಕ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಈ ಕುರಿತು ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.006/2026 ಅಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7(ಎ) ಅನ್ವಯ ಪ್ರಕರಣ ದಾಖಲಾಗಿದೆ.
ಪಿಐ ಸಿದ್ರಾಯ ಬಾಳೂರಗಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ಡಿಎಸ್‌ಪಿ ಜೆ.ಹೆಚ್. ಇನಾಮದಾರ್ ಮಾರ್ಗದರ್ಶನ ನೀಡಿದ್ದು, ಎಸ್‌ಪಿ ಸಿದ್ರಾಜು ಸಿ ಅವರ ಮೇಲ್ವಿಚಾರಣೆಯಲ್ಲಿ ದಾಳಿ ಯಶಸ್ವಿಯಾಗಿ ನಡೆದಿದೆ.