ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (Mohammed Haris Nalapad) ಅವರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು (ಏ.20) ದಾಳಿ ನಡೆಸಿದ್ದಾರೆ. ಇಡಿ ದಾಳಿಯ ಹಿಂದೆ ಸುಮಾರು 10 ಲಕ್ಷ ರೂ. ಹಣದ ವ್ಯವಹಾರದ ಶಂಕೆ ಪ್ರಮುಖ ಕಾರಣವಾಗಿದ್ದು, ಬಿಟ್‌ಕಾಯಿನ್ ಪ್ರಕರಣದ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಹ್ಯಾಕರ್ ಶ್ರೀಕಿ ಜೊತೆಗೆ ಹಣಕಾಸು ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ನಲಪಾಡ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಶ್ರೀಕಿ ಜೊತೆಗೆ ಅವರ ಆರ್ಥಿಕ ಸಂಬಂಧಗಳ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲೇ ಇಡಿ ದಾಳಿ ನಡೆಸಿದೆ. 2020ರಲ್ಲಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಂತರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು.
28 ಲಕ್ಷ ರೂ. ಬಿಟ್‌ಕಾಯಿನ್ ಹೂಡಿಕೆಯಿಂದ 45 ಲಕ್ಷ ರೂ. ಲಾಭ ನೀಡುವುದಾಗಿ ನಂಬಿಸಿ ವಂಚನೆ ನಡೆದಿತ್ತು ಎಂದು ಆರೋಪಿಸಲಾಗಿದೆ. ಈ ಭರವಸೆಯನ್ನು ನಂಬಿ ಯಶೋಧಾ ದೇವಿ ಎಂಬವರು ಅಜೀತ್ ಎಂಬವರ ಖಾತೆಗೆ 28 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ ನಂತರ ಲಾಭವೂ ಇಲ್ಲ, ಮೂಲಧನವೂ ವಾಪಸ್ ಸಿಕ್ಕಿಲ್ಲ ಎಂದು ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಶ್ರೀಕಿ, ರಾಬಿನ್ ಖಂಡೇಲ್ವಾಲ ಮತ್ತು ಅಜೀತ್ ಖಂಡೇಲ್ವಾಲ ವಿರುದ್ಧ ಆರೋಪ ಮಾಡಲಾಗಿದೆ.
ತನಿಖೆಯ ವೇಳೆ ನಲಪಾಡ್ ಹೆಸರು ಕೂಡ ಹೊರಬಂದಿದ್ದು, ಶ್ರೀಕಿ ಅವರ ಜಾಲದೊಂದಿಗೆ ಸಂಪರ್ಕಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶ್ರೀಕಿ, ನಲಪಾಡ್ ಅವರ ಸಹೋದರ ಓಮರ್ ನಲಪಾಡ್ ಅವರ ಸಹಪಾಠಿಯಾಗಿದ್ದ ಕಾರಣ ಪರಿಚಯ ಬೆಳೆದಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆ ನಲಪಾಡ್ ಮತ್ತು ಶ್ರೀಕಿ ನಡುವೆ ಸಂಪರ್ಕ ಇದ್ದುದಾಗಿ ತನಿಖೆಯಲ್ಲಿ ಕಂಡುಬಂದಿದೆ.
ಬಾಂಬೆ ಮೂಲದ ವ್ಯಕ್ತಿಗೆ ಬಿಟ್‌ಕಾಯಿನ್ ಹ್ಯಾಕ್ ಮೂಲಕ ಹಣ ಕಳುಹಿಸಿದ ನಂತರ, ಸುಮಾರು 10 ಲಕ್ಷ ರೂ. ನಲಪಾಡ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಣವನ್ನು ವಾಪಸ್ ನೀಡುವುದಾಗಿ ನಲಪಾಡ್ ಹೇಳಿದ್ದರೂ, ಇದುವರೆಗೆ ಯಾವುದೇ ಮರುಪಾವತಿ ಆಗಿಲ್ಲ ಎಂದು ತಿಳಿದುಬಂದಿದೆ. ಇಷ್ಟಾದರೂ ಎಸ್‌ಐಟಿ ಇನ್ನೂ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಹಾಗೂ ನಲಪಾಡ್ ಅವರನ್ನು ಅಧಿಕೃತವಾಗಿ ಆರೋಪಿಯಾಗಿ ಸೇರಿಸಿಲ್ಲ ಎಂದು ವರದಿಯಾಗಿದೆ. ಇದೇ ಕಾರಣದಿಂದ ಇಡಿ ಪ್ರಕರಣ ದಾಖಲಿಸಿಕೊಂಡು ಇದೀಗ ದಾಳಿ ನಡೆಸಿದೆ.