ಮೈಸೂರು: ಚಾಮರಾಜನಗರ ಜಿಲ್ಲೆಯ ಖ್ಯಾತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಅರಣ್ಯ ಇಲಾಖೆಯ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿತವಾಗಿರುವ ಕಳ್ಳಬೇಟೆ ತಡೆ ಶಿಬಿರದ ಸಮೀಪ ಕೆಲವರು ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ನಡೆದಿರುವ ಈ ಘಟನೆ ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಸಂರಕ್ಷಿತ ಹಾಗೂ ಪರಿಸರ ಸೂಕ್ಷ್ಮ ವಲಯಕ್ಕೆ ಹೇಗೆ ಪ್ರವೇಶ ಪಡೆದರು ಎಂಬ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಸತೀಶ್ ತನ್ನ ಸಹಚರರಾದ ಗಂಗಾಧರ್ ಹಾಗೂ ಚೇತನ್ ಅವರೊಂದಿಗೆ ಮದ್ದೂರು ವಲಯದ ಹುಲಿಕಟ್ಟೆ ಪ್ರದೇಶಕ್ಕೆ ತೆರಳಿ, ಕಳ್ಳಬೇಟೆ ತಡೆ ಶಿಬಿರದ ಸಮೀಪ ಮದ್ಯ ಸೇವಿಸಿರುವ ಆರೋಪ ಎದುರಿಸುತ್ತಿದ್ದಾನೆ.
ಈ ಪ್ರದೇಶವು ವನ್ಯಜೀವಿಗಳ ನಿರಂತರ ಓಡಾಟಕ್ಕೆ ಪ್ರಸಿದ್ಧವಾಗಿದ್ದು, ಹುಲಿ ಸಂರಕ್ಷಿತ ಪ್ರದೇಶದ ಅತ್ಯಂತ ಸೂಕ್ಷ್ಮ ವಲಯಗಳಲ್ಲಿ ಒಂದಾಗಿದೆ. ಅರಣ್ಯದೊಳಗೆ ಮೂವರು ಮದ್ಯ ಸೇವಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಯಾರಣ್ಯದ ಭದ್ರತೆ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗಳ ಕುರಿತು ಗಂಭೀರ ಕಳವಳ ಮೂಡಿಸಿದೆ.