ಹೊಳೆನರಸೀಪುರ: ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಸಂಸದ ಶ್ರೇಯಸ್ ಪಟೇಲ್ ಅವರು ವಿಷಯದ ಗಂಭೀರತೆಯನ್ನು ಅರಿತು, ನೌಕರರ ಹಿತಾಸಕ್ತಿ ಹಾಗೂ ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಭರವಸೆ ನೀಡಿದರು. ಅಲ್ಲದೆ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದು, ಈ ವಿಷಯವನ್ನು ಸಂಸತ್ತಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನೌಕರರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೆಪಿಟಿಸಿಎಲ್ ನೌಕರರ ಸಂಘದ ಮನವಿಯ ಮೇರೆಗೆ ಈ ಭೇಟಿ ಹಾಗೂ ಮನವಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿದಲ್ಲಿ ಸರ್ಕಾರದ ನಿಯಂತ್ರಣ ಕುಂಠಿತವಾಗುವ ಸಾಧ್ಯತೆ ಇದ್ದು, ಇದರಿಂದ ನೌಕರರು, ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗೆ ಧಕ್ಕೆಯಾಗುವ ಆತಂಕವಿದೆ ಎಂದು ಪ್ರತಿನಿಧಿಗಳು ವಿವರಿಸಿದರು.

ವಿದ್ಯುತ್ ಶಕ್ತಿ ಕಾಯ್ದೆ–2003ರ ಸಂಬಂಧಿತ ನಿಯಮಗಳ ಅನ್ವಯ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ತಿರಸ್ಕರಿಸಬೇಕು. ಜೊತೆಗೆ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆ ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿಯೇ ಮುಂದುವರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ರಾಜ್ಯದ ಜನಹಿತ, ವಿದ್ಯುತ್ ಕ್ಷೇತ್ರದ ಸ್ಥಿರತೆ ಹಾಗೂ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ವಿರೋಧಿಸಬೇಕೆಂದು ವಿದ್ಯುತ್ ಕ್ಷೇತ್ರದ ಸಿಬ್ಬಂದಿ ಹಾಗೂ ಕೆಪಿಟಿಸಿಎಲ್ ನೌಕರರ ಒಕ್ಕೂಟದ ಪ್ರತಿನಿಧಿಗಳು ಸಂಸದರಿಗೆ ಮನವಿ ಮಾಡಿದರು.