ತುಮಕೂರು ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಒಂದೇ ಸಮಯದಲ್ಲಿ 32 ನವಿಲುಗಳು ಸಾವನ್ನಪ್ಪಿರುವ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಈ ಸಾವುಗಳ ಹಿಂದೆ ಹೀಟ್‌ಸ್ಟ್ರೋಕ್ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಏಪ್ರಿಲ್ 16ರಿಂದ 21ರವರೆಗೆ ಈ ದುರ್ಘಟನೆ ಸಂಭವಿಸಿದೆ. ಉರಿ ಬಿಸಿಲಿನ ತೀವ್ರತೆ ನವಿಲುಗಳ ಜೀವ ಕಸಿದಿರಬಹುದೆಂಬ ಅಂದಾಜು ಮೂಡಿದ್ದು, ಘಟನೆ ಸ್ಥಳೀಯರಲ್ಲಿ ಕಳವಳ ಹುಟ್ಟಿಸಿದೆ. ಮೃತ ನವಿಲುಗಳ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಳಿಕ ನಿಖರ ಕಾರಣ ಬಹಿರಂಗವಾಗಲಿದೆ.