LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

*ಕುಡಿಯವ ನೀರಿನ ದರ ಹೆಚ್ಚಳದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್*

 

*ಕಾವೇರಿ 5 ನೇ ಹಂತದಲ್ಲಿ 15 ಸಾವಿರ ನೂತನ ಸಂಪರ್ಕ; ಬಿಡಬ್ಲ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟ*

 

*ನೀರಿನ ಅಕ್ರಮ ಸಂಪರ್ಕಗಳ ಸಕ್ರಮಕ್ಕೆ ಕ್ರಮ, ನೀರಿನ ಬಿಲ್‌ ಬಾಕಿ ಮೊತ್ತ ತುಂಬಲು ಓಟಿಎಸ್‌ ಶೀಘ್ರ ಜಾರಿ*

 

*ಬೆಂಗಳೂರು, ಜ.28:*

 

“ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

 

ನಗರದ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು, ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

 

“2014 ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ” ಎಂದರು.

 

*ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ:*

 

“ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ” ಎಂದರು.

 

“ಈ ಹಿಂದೆ ಕೊಳೆಗೇರಿ ಹಾಗೂ ಬಡವರ ಉಪಯೋಗಕ್ಕೆ ಸರ್ಕಾರ ರೂ.20 ಕೋಟಿ ಹಣ ಮೀಸಲಿಟ್ಟಿತ್ತು. ಹಿಂದಿನ ಬಿಜೆಪಿ ಸರ್ಕಾರ ಈ ಸಹಾಯಧನವನ್ನು ನಿಲ್ಲಿಸಿತ್ತು. ಇದನ್ನು ಮುಂದುವರೆಸಲಾಗುವುದು. ಬಡವರಿಗೆ ನೀರು ನೀಡಿದರೂ ಸಹ ಅದು ಕೂಡ ಲೆಕ್ಕಕ್ಕೆ ಸಿಗಬೇಕು. 1 ಪೈಸೆ ಹಣ ನೀಡಿಯಾದರೂ ಸಂಪರ್ಕ ನೀಡಬೇಕು. ಯಾರು ಎಷ್ಟು ನೀರು ಪಡೆಯುತ್ತಿದ್ದಾರೆ ಎನ್ನುವ ಲೆಕ್ಕ ಸರ್ಕಾರಕ್ಕೆ ಸಿಗಬೇಕು. ಅನೇಕ ಕಡೆ ಕೊಳೆಗೇರಿ ಹೆಸರಿನಲ್ಲಿ ಉಳ್ಳವರು ನೀರು ಪಡೆಯುತ್ತಿದ್ದಾರೆ” ಎಂದರು.

 

“ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಂಡಿರುವ ತೆರಿಗೆ ಪಾವತಿಗೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲಿ ನೀರಿನ ಸಂಪರ್ಕ, ಬಳಕೆಯಾಗುವ ನೀರಿನ ಬಗ್ಗೆ ನಿಖರ ಮಾಹಿತಿ ಸಿಗಬೇಕು ಎಂದು ಯೋಜನೆ ರೂಪಿಸಲಾಗಿದೆ. ಬಡವರು, ಶ್ರೀಮಂತರು, ವಸತಿ ಸಮುಚ್ಚಯಗಳು ಹೀಗೆ ಪ್ರತಿಯೊಂದು ಲೆಕ್ಕವೂ ಸಿಗಬೇಕು. ಸಾರ್ವಜನಿಕರು ಕೊಂಚವಾದರೂ ಹಣ ಪಾವತಿ ಮಾಡಿ ನೀರಿನ ಸಂಪರ್ಕ ಪಡೆಯಬೇಕು. ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಬೇಕು. ಬಿಡ್ಬ್ಯೂ ಎಸ್ ಎಸ್ ಬಿ ಉಳಿವಿಗೆ ಮತ್ತು ಎಲ್ಲರಿಗೂ ನೀರನ್ನು ಒದಗಿಸಿಕೊಡಲು ನಾವು ತೀರ್ಮಾನ ಮಾಡಬೇಕಿದೆ” ಎಂದು ಮನವಿ ಮಾಡಿದರು.

 

*ಬೇಸಿಗೆಗೆ ಈಗಿನಿಂದಲೇ ತಯಾರಿ*

 

“ಮುಂಬರುವ ಬೇಸಿಗೆ ವೇಳೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎನ್ನುವ ಸೂಚನೆ ನೀಡಲಾಗಿದೆ. ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಯಾವುದಾದರೂ ಕೆರೆ ತುಂಬಿಸಬೇಕಿದ್ದರೆ ಈ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.

 

*15 ಸಾವಿರ ನೂತನ ಸಂಪರ್ಕ*

 

“ಕಾವೇರಿ 5 ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಇದುವರೆಗೂ ಸುಮಾರು 15 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇನ್ನೂ 20 ಸಾವಿರದಷ್ಟು ನೀರಿನ ಸಂಪರ್ಕಗಳನ್ನು ನೀಡಬೇಕಾಗಿದೆ. ಅಲ್ಲದೇ ಸಾಕಷ್ಟು ವಸತಿ ಸಮುಚ್ಚಯಗಳು ನೀರಿನ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ಕಡ್ಡಾಯವಾಗಿ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ” ಎಂದರು.

 

“ಸಾರ್ವಜನಿಕರ ಉಪಯೋಗಕ್ಕೆ ಎಂದು ಸರ್ಕಾರ ಹಣ ಖರ್ಚು ಮಾಡಿದೆ. ಅನೇಕ ಕಡೆ ಸೇವಾ ಶುಲ್ಕ, ಠೇವಣಿ ಶುಲ್ಕ ಸೇರಿದಂತೆ ಇತರೇ ಶುಲ್ಕಗಳನ್ನು ಕಟ್ಟಬೇಕು ಎಂದು ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕಠಿಣ ಕ್ರಮ ತೆಗೆದುಕೊಂಡಿದೆ. ಪ್ರತಿಯೊಂದು ಮನೆ, ವಸತಿ ಸಮುಚ್ಚಯಕ್ಕೆ ಹೋಗಿ ಜನರಿಗೆ ತಿಳುವಳಿಕೆ ಮೂಡಿಸಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಮನವಿ ಮಾಡಲು ಸೂಚನೆ ನೀಡಿದ್ದೇನೆ” ಎಂದು ಹೇಳಿದರು.

 

ನೀರಿನ ದರವನ್ನು ಎಷ್ಟು ಏರಿಕೆ ಮಾಡಲಾಗುವುದು ಎಂದು ಕೇಳಿದಾಗ, “ಮಂಡಳಿಗೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಚರ್ಚೆಯ ನಂತರ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ಇದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್ ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಇದರಿಂದ ನೀರಿನ ಬಳಕೆಯ ಲೆಕ್ಕ ದೊರೆಯಲಿ ಎನ್ನುವುದು ಇದರ ಉದ್ದೇಶ” ಎಂದರು.

 

*ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ*

 

ಮೆಟ್ರೋ ಟಿಕೆಟ್ ಬೆಲೆ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಜೊತೆಗೆ ನೀರಿನ ಬೆಲೆ ಏರಿಕೆಯಾದರೆ ಜನರಿಗೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದೆಲ್ಲ ಆಗುತ್ತಿದೆ. ನೌಕರರಿಗೆ ಶೇ. 10 ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ” ಎಂದರು.

 

ಬಿಡ್ಬ್ಯೂಎಸ್ಎಸ್ ಬಿಯಲ್ಲಿಯೂ ಓಟಿಎಸ್ ವ್ಯವಸ್ಥೆ ತರಲಾಗುವುದೇ ಎಂದು ಕೇಳಿದಾಗ, “ಇದರ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವವರಿಗೆ ಈ ವ್ಯವಸ್ಥೆ ತರಲು ಅಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದ್ದೇನೆ” ಎಂದರು.

 

*ಫೆಬ್ರವರಿ ಅಂತ್ಯಕ್ಕೆ ಟನಲ್ ರಸ್ತೆ ಟೆಂಡರ್*

 

“ಸುರಂಗ ರಸ್ತೆ ನಿರ್ಮಾಣಕ್ಕಾಗಿ ರೂ. 17,780 ಕೋಟಿ ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅತ್ಯಂದ ವೇಳೆಗೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮೂರುವರೆ ವರ್ಷಗಳ ಒಳಗಾಗಿ ಮುಗಿಯಬೇಕು ಎಂದು ತಿಳಿಸಿದ್ದೇನೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿಯಿಂದಲೂ ಹಣ ನೀಡಲಾಗುವುದು. ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್ ಗಳು ಸಾಲ ನೀಡಲು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು” ಎಂದು ಹೇಳಿದರು.

ಟನಲ್ ರಸ್ತೆ ಬೇಡ ಎಂದು ಸಂಸದ ಪಿ.ಸಿ.ಮೋಹನ್ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಇದರಿಂದ ಯಾರ ಭೂಮಿಯೂ ಹೋಗುವುದಿಲ್ಲ. ಭೂಮಿಯ ಕೆಳಗೆ ಹೋಗುತ್ತದೆ” ಎಂದರು. ಅರಮನೆ ಮೈದಾನದಲ್ಲಿ ಸುರಂಗ ರಸ್ತೆ ಬರುತ್ತದೆಯೇ ಎಂದು ಮರು ಪ್ರಶ್ನಿಸಿದಾಗ, “ಎಲ್ಲಿ ಬಂದರೂ ಭೂಮಿಯ ಒಳಗಡೆ ಬರುತ್ತದೆ” ಎಂದರು.

ಬೆಂಗಳೂರಿನಲ್ಲಿ ಇ ಖಾತಾ ಹೊಂದಿಲ್ಲದ ಆಸ್ತಿಗಳಿಗೆ ಬಿ ಖಾತೆ ನೀಡುವ ವಿಚಾರವಾಗಿ ಕೇಳಿದಾಗ, “ಇಡೀ ದೇಶದಲ್ಲಿಯೇ ಇಲ್ಲದ ಕ್ರಾಂತಿಕಾರಕ ವ್ಯವಸ್ಥೆ ಬೆಂಗಳೂರಿನಲ್ಲಿ ಬರಲಿದೆ. ಮುಂದಿನ ವಾರದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದರು.

ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಅಪರ ಜಯರಾಮ್‌, ಬಿಬಿಎಂಪಿ ಆಯುಕ್ತರಾದ ತುಷಾರ್‌ ಗಿರಿನಾಥ್‌, ಬಿಡಬ್ಲೂಎಸ್‌ಎಸ್‌ಬಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌, ಬಿಡಿಎ ಆಯುಕ್ತರಾದ ಜಯರಾಮ್‌ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರುನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ: ರಮೇಶ್ಡಿಸಿಎಂ ಸೂಚನೆಯಂತೆ ರಸ್ತೆ ಬದಿ, ರಸ್ತೆ ವಿಭಜಕಗಳ ಗಿಡಗಳ ನಿರ್ವಹಣೆಗೆ ಆದೇಶಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರಿಸಲು ಮಾ.16ಕ್ಕೆ ಧರಣಿBalc ನಿಂದ ಉಚಿತ ವೃತ್ತಿ ಮಾರ್ಗದರ್ಶನ,sat ಬಿಡುಗಡೆಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿವಾಳ ಸಂಘದಿಂದ ಮಾ.16ಕ್ಕೆ ಫ್ರೀಡಂ ಪಾರ್ಕಿನಲ್ಲಿ ಧರಣಿಕೊಲ್ಲಿ ಯುದ್ಧ: ಕನ್ನಡಿಗರನ್ನು ರಕ್ಷಿಸಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯಇಸ್ರೇಲ್ ಇರಾನ್ ನಡುವೆ ಯುದ್ಧ, ದುಬೈನಲ್ಲಿ ಕನ್ನಡಿಗರಿಗೆ ಆತಂಕ, ರಕ್ಷಣೆಗೆ ಸಿಎಂ ಮುಂದುಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರಮಂಜು ಪಾಂಡವಪುರ ನಿರ್ದೇಶನದಲ್ಲಿ " ಮಣ್ಣಿನ ಮಗ ಮಾರ್ಗದರ್ಶಿ " ರೈತ ಸಾಧಕನ ಕುರಿತ ಸಾಕ್ಷಾಚಿತ್ರ