ಗದಗ: ಜಿಲ್ಲೆಯ ಐತಿಹಾಸಿಕ ಮಹತ್ವದ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಪುರಾತನ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಹೊರಬಿದ್ದಿದೆ.
ಇಲ್ಲಿ ದೊರೆತ ಸುಮಾರು 466 ಗ್ರಾಂ ತೂಕದ ಅಪರೂಪದ ಚಿನ್ನದ ಪುರಾತನ ಆಭರಣಗಳ ಮೌಲ್ಯ ಅಂದಾಜು ಬರೋಬ್ಬರಿ 8 ಕೋಟಿ ರೂ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಮಾತನಾಡಿದ ಅವರು, ಲಕ್ಕುಂಡಿಯಲ್ಲಿ ಸಿಕ್ಕಿರುವ ಖಜಾನೆಯಲ್ಲಿ ಸುಮಾರು 466 ಗ್ರಾಂ ತೂಕದ 600 ವರ್ಷಗಳ ಹಳೆಯ ಅಪರೂಪದ ಚಿನ್ನಾಭರಣಗಳು ಸೇರಿವೆ ಎಂದು ಹೇಳಿದ್ದಾರೆ.
ಖಜಾನೆಯ ಮೌಲ್ಯಮಾಪನಕ್ಕಾಗಿ ಪುರಾತತ್ವ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಸಲ್ಲಿಸಿದ ವರದಿ ಆಧರಿಸಿ ಅಂತರರಾಷ್ಟ್ರೀಯ ಪುರಾತತ್ವ ಮೌಲ್ಯದ ಪ್ರಕಾರ ಈ ಖಜಾನೆಯ ಬೆಲೆ ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಲಕ್ಕುಂಡಿಯಲ್ಲಿ ಮನೆ ನಿರ್ಮಾಣ ಕಾಮಗಾರಿಯ ಅಡಿಪಾಯ ತೋಡುವ ವೇಳೆ ಈ ಅಮೂಲ್ಯ ಖಜಾನೆ ಪತ್ತೆಯಾಗಿತ್ತು. 15 ವರ್ಷದ ಪ್ರಜ್ವಲ್ ಎಂಬ ಬಾಲಕ ಪ್ರಾಮಾಣಿಕತೆಯಿಂದ ಆಭರಣಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದ ಹಿನ್ನೆಲೆ ಬುಧವಾರ ಆತನ ಕುಟುಂಬವನ್ನು ಸನ್ಮಾನಿಸಲಾಯಿತು.
ಲಕ್ಕುಂಡಿ ಹೆರಿಟೇಜ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿಯ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ್ ಮಾತನಾಡಿ, ಲಕ್ಕುಂಡಿಯಲ್ಲಿ ಪುರಾತತ್ವ ಅನ್ವೇಷಣಾ ಕಾರ್ಯಗಳು ನಿರಂತರವಾಗಿ ಸಾಗುತ್ತಿದ್ದು, ಈಗಾಗಲೇ ಹಲವು ಪುರಾತನ ವಸ್ತುಗಳನ್ನು ಪತ್ತೆಹಚ್ಚಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.