ಬೆಂಗಳೂರು: ರಾಜ್ಯದಲ್ಲಿ ಮತ್ತೆ ಜನಿವಾರ ವಿವಾದ ಸದ್ದು ಮಾಡುತ್ತಿದೆ. ಗುರುವಾರ (ಏ.23) ನಡೆದ ಸಿಇಟಿ ಪರೀಕ್ಷೆಯಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಆರೋಪ ಕೇಳಿಬಂದಿದೆ. ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಆನಂದ್ ಸುಧೀರ್ ರಾವ್ ಸೇರಿದಂತೆ ಹಲವರಿಂದ ಜನಿವಾರ ತೆಗೆಸಲಾಗಿದೆ ಎನ್ನಲಾಗಿದೆ. ವಿದ್ಯಾರ್ಥಿ ವಿರೋಧ ವ್ಯಕ್ತಪಡಿಸಿದಾಗ ಮನೆಗೆ ಹಿಂತಿರುಗಲು ಹೇಳಿದರೆಂಬ ಆರೋಪವೂ ಇದೆ. ಮಗನ ಭವಿಷ್ಯ ಗಮನಿಸಿ ಪೋಷಕರು ಕೊನೆಗೆ ಜನಿವಾರ ತೆಗೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ತಹಶೀಲ್ದಾರ್, ಶಿಕ್ಷಣಾಧಿಕಾರಿಗಳು ಮತ್ತು ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರಿಂದ ವಿಷಯ ಬಹಿರಂಗಪಡಿಸದಂತೆ ಒತ್ತಾಯಿಸಿ ಲಿಖಿತ ಪತ್ರ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ ಕಾಲೇಜು ಸಿಬ್ಬಂದಿ ಕ್ಷಮೆ ಕೇಳಿ, ಇಂದು ಜನಿವಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಡ್ರೆಸ್ ಕೋಡ್ ಬಗ್ಗೆ ಈಗಾಗಲೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ ಎಂದರು. ಇದು ಸಣ್ಣ ಘಟನೆ, ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಘಟನೆ ನಡೆದಿದ್ದರೆ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ವರ್ಷ ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ನಿರಾಕರಿಸಿದ ಘಟನೆ ನಡೆದಿತ್ತು. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ, ಇದೀಗ ಮತ್ತೆ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.