ಬೀದರ್: ಜಾತ್ರೆಯಲ್ಲಿ ರಥದ ಚಕ್ರದಡಿ ಸಿಲುಕಿ ವ್ಯಕ್ತಿಯೋರ್ವನ ಎರಡೂ ಕಾಲು ಕಟ್ ಆಗಿದ್ದು, ಇನ್ನಿಬ್ಬರ ಕಾಲಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಥೇರು ಮೈದಾನದಲ್ಲಿ ನಡೆದಿದೆ.
ಶ್ರೀ ಬಸವೇಶ್ವರ ಜಾತ್ರಾ ರಥದಡಿ ಸಿಲುಕಿದ ಧನರಾಜ್ ಎಂಬುವವರ ಎರಡೂ ಕಾಲು ಕತ್ತರಿಸಿಕೊಂಡಿವೆ. ಇನ್ನಿಬ್ಬರು ವ್ಯಕ್ತಿಗಳು ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಮಾಶಂಕರ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ಜಾತ್ರಾ ರಥೋತ್ಸವ ಭರದಿಂದ ನಡೆಯುತ್ತಿತ್ತು. ಲಕ್ಷಾಂತರ ಭಕ್ತರು ಥೇರು ನೋಡಲು ಸೇರಿದ್ದರು. ಈ ವೇಳೆ ರಥ ನಿಯಂತ್ರಣ ತಪ್ಪಿ ಕೆಲವರ ಕಾಲಿನ ಮೇಲೆ ಹರಿದಿದೆ.
ರಥವನ್ನು ಎಳೆಯಲು ಬಸವಭಕ್ತರು ಉತ್ಸಾಹದಿಂದ ಮುಂದಾಗಿದ್ದ ವೇಳೆ ಏಕಾಏಕಿ ನೂಕಾಟ-ತಳ್ಳಾಟ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ತಕ್ಷಣ ಬಸವಕಲ್ಯಾಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.