ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಗೆ ಮತ್ತೆ ಜೈಲು ಶಿಕ್ಷೆ ಖಚಿತವಾಗಿದ್ದು, ಶಾಸಕ ಸ್ಥಾನಕ್ಕೆ ಕುತ್ತು ಎದುರಾಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯೋಗೇಶ್ ಗೌಡ ಕೊಲೆ ಕೇಸ್ ನಲ್ಲಿ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಸೇರಿ 19 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಯೋಗೇಶ್ ಗೌಡ ಕೊಲೆ ಹಾಗೂ ಒಳಸಂಚು ಸಾಬೀತು ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅಪರಾಧಿ ಎಂದು ಅಂತಿಮ ತೀರ್ಪು ಪ್ರಕಟಿಸಿದೆ. ನಾಳೆ ಶಿಕ್ಷೆ ಪ್ರಮಾಣದ ಬಗ್ಗೆ ವಾದ ಮಂಡನೆಯಾಗಲಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 19 ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅವರಲ್ಲಿ ಒಟ್ಟು 19 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಪ್ರಕರಣದ ಎ 20 ಹಾಗೂ ಎ 21 ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶ ನೀಡಿದೆ. 21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೈಕಿ ಕೋರ್ಟ್, 19 ಆರೋಪಿಗಳನ್ನ ದೋಷಿ ಎಂದು ತೀರ್ಪು ನೀಡಿದೆ. ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರಿಂದ ಇವರಿಬ್ಬರನ್ನು ಹೊರತುಪಡಿಸಿ ಉಳಿದವರ ತೀರ್ಪು ಪ್ರಕಟಿಸಿದೆ. ಇನ್ನು ಪ್ರಕರಣದ ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ ಅವರನ್ನ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.
ಯೋಗೇಶ್ ಗೌಡ ಕೊಲೆ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮತ್ತೆ ಜೈಲು ಶಿಕ್ಷೆ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೂ ಕುತ್ತು ಬಂದಿದ್ದು, ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ಏ.9ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ತಾಂತ್ರಿಕ ಕಾರಣಗಳು ಹಾಗೂ ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಏ.15ಕ್ಕೆ ಮೂಂದೂಡಿತ್ತು. ಇದೀಗ ನ್ಯಾಯಾಯಲಯ ಆರೋಪಿಗಳಾದ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣದ ಬಗ್ಗೆ ನಾಳೆ ವಾದ ಮಂಡನೆಯಾಗಲಿದೆ.
ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂ.15ರಂದು ಧಾರವಡದ ಸಪ್ತಾಪುರ ಬಡಾವಣೆಯ ಉದಯ ಜಿಮ್ ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಕೊಲೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಈ ಕೊಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ 2020ರ ನ.5ರಂದು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

