ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಹೊಯ್ಸಳ ದ್ರಾವಿಡ ಶೈಲಿಯಲ್ಲಿ ಶಿಲ್ಪಕಲೆಯಿಂದ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀ ಭೈರವೈಕ್ಯ ಮಂದಿರ ಉದ್ಘಾಟಿಸಲಿದ್ದಾರೆ. ಬುಧವಾರ ಬೆಳಗ್ಗೆ 11:30 ಕ್ಕೆ ಪ್ರಧಾನಿ ಮೋದಿ ಅವರಿಂದ ಶ್ರೀ ಕ್ಷೇತ್ರದ ಡಾ. ಬಾಲಗಂಗಾಧರನಾಥ ಶ್ರೀಗಳ ಶ್ರೀ ಗುರುಭೈರವೈಕ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ. ನಾಥ ಪರಂಪರೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ದೇಶದ ಪ್ರಧಾನಿ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ.
ಬೆಳಗ್ಗೆ 10:55ಕ್ಕೆ ಆದಿಚುಂಚನಗಿರಿ ಕ್ಷೇತ್ರದ ತಪೋವನ ಆವರಣದಲ್ಲಿರುವ ಹೆಲಿಪ್ಯಾಡ್ ಗೆ ಮೋದಿ ಬಂದಿಳಿಯಲಿದ್ದಾರೆ. 1.5 ಕಿಲೋಮೀಟರ್ ವರೆ ಎಸ್ಪಿಜಿ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬಂದು ಶ್ರೀ ಕ್ಷೇತ್ರ ಕಾಲಭೈರವೇಶ್ವರ ದೇವಾಲಯ ಪಕ್ಕದಲ್ಲಿ ನಿರ್ಮಿಸಿದ ಶ್ರೀ ಗುರುಭೈರವೈಕ್ಯ ಮಂದಿರ ಉದ್ಘಾಟಿಸಲಿದ್ದಾರೆ.
ಬಾಲಗಂಗಾಧರನಾಥ ಶ್ರೀಗಳ ಪಾದುಕೆಗೆ ನಮಸ್ಕರಿಸಿ ಶ್ರೀಗಳ ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರ, ನೆಲ ಮಹಡಿಲ್ಲಿರುವ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕಿದ ನಂತರ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

