ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -2 ನೋಂದಣಿಗೆ ಏಪ್ರಿಲ್ 9ರಿಂದ 17ರ ವರೆಗೆ ಅವಕಾಶ ಕಲ್ಪಿಸಿದೆ.
2026ರಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ -2ಗೆ ನೋಂದಣಿ ಮಾಡಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ಲಿಂಕ್ ಬಳಸಿ ಅಥವಾ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವ ಮೂಲಕ ಪಿಯು ಪರೀಕ್ಷೆ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
2026ರ ಪರೀಕ್ಷೆ-1ರಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರದಿಂದ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳನ್ನು ಪೋರ್ಟಲ್ ಮೂಲಕ ನೋಂದಾಯಿಸಲು ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಅವಕಾಶ ನೀಡಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ನೋಂದಾಯಿಸಿಕೊಂಡು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರು ನಿಗದಿತ ಸಮಯದೊಳಗೆ ಪ್ರವೇಶ ಪತ್ರ ವಿತರಿಸಬೇಕು ಎಂದು ಸೂಚಿಸಲಾಗಿದೆ.
ಏಪ್ರಿಲ್ 30 ರಿಂದ ಮೇ 13 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ -2 ನಡೆಯಲಿದ್ದು, ವಿದ್ಯಾರ್ಥಿಗಳು ಮಂಡಳಿಯಿಂದ ಒದಗಿಸುವ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಪ್ರಶ್ನೆ ಕೋಠಿಯ ಸಹಾಯದಿಂದ ಪರೀಕ್ಷೆಗೆ ಸಿದ್ಧವಾಗಬಹುದು ಎಂದು ತಿಳಿಸಲಾಗಿದೆ.

