ಬೆಳಗಾವಿ : ನಗರದಲ್ಲಿ ಅಕ್ರಮ ಮಟ್ಕಾ ಜೂಜಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ 28,840 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಲಕ್ಷ್ಮೀ ಗಲ್ಲಿಯ ಪ್ರಕಾಶ್ ಪೀರಾಜಿ ಹುಲುಕೋತ್ಲೆ (31) ಹಾಗೂ ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ರೋಹಿತ್ ಅರ್ಜುನ ಮುರಾರಿ (22) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಮಟ್ಕಾ ಜೂಜಾಟ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಕ್ರಮ ಮಟ್ಕಾ ಜೂಜಾಟದ ಜಾಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.