ಬೆಂಗಳೂರು (ಮೇ 11): ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯವಾಗಲಿದೆ. ಇದರಿಂದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಪರಿಷ್ಕರಿಸಲಾಗಿದ್ದು, ಶೇ. 1.50 ರಷ್ಟು ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹೆಚ್ಚಳವು 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗಲಿದೆ ಮತ್ತು 2026ರ ಜನವರಿ 1 ರಿಂದ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರವು ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರಿಗೆ ಸಹ ತುಟ್ಟಿಭತ್ಯೆ ಹೆಚ್ಚಳದ ಲಾಭ ನೀಡಿದೆ. ಹಾಲಿ ಶೇ. 14 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ. 15.75 ಕ್ಕೆ ಹೆಚ್ಚಿಸಲಾಗಿದ್ದು, ಇದು 2026ರ ಜನವರಿ 1 ರಿಂದ ಪರಿಣಾಮಕಾರಿಯಾಗಲಿದೆ.
ಈ ನಿರ್ಧಾರದಿಂದ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೇರ ಆರ್ಥಿಕ ಲಾಭ ದೊರೆಯಲಿದ್ದು, ಸರ್ಕಾರದ ಆದೇಶದಂತೆ ಪರಿಷ್ಕೃತ ದರಗಳು ಮುಂದಿನ ದಿನಗಳಲ್ಲಿ ಅನ್ವಯವಾಗಲಿವೆ.