ಆನೇಕಲ್: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ಕೈದಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಕಾರಾಗೃಹ ಇಲಾಖೆ ₹2.25 ಕೋಟಿ ವೆಚ್ಚದಲ್ಲಿ ಹೈಟೆಕ್ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿದೆ.
ಈ ಹಿಂದೆ ಎಐ ಕ್ಯಾಮರಾ ಹಾಗೂ ಡಿಜಿಟಲ್ ಟೋಕನ್ ವ್ಯವಸ್ಥೆ ಮೂಲಕ ಕೈದಿಗಳು ಮತ್ತು ಸಂದರ್ಶಕರ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು. ಇದೀಗ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಯೋಮೆಟ್ರಿಕ್ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇತ್ತೀಚೆಗೆ ಜೈಲಿಗೆ ಎಸ್ಪಿ ಅನ್ಶುಕುಮಾರ್ ಹಾಗೂ ಡಿಜಿಪಿ ಅಲೋಕ್ ಕುಮಾರ್ ನೇಮಕವಾದ ಬಳಿಕ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ₹2.25 ಕೋಟಿ ವೆಚ್ಚದಲ್ಲಿ ಜೈಲಿನ ಪ್ರತಿಯೊಂದು ಬ್ಯಾರಕ್, ಭೇಟಿದಾರರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆಮನೆ, ಗ್ರಂಥಾಲಯ, ಮೈದಾನ, ಕರಕುಶಲ ಘಟಕಗಳು ಹಾಗೂ ಬೇಕರಿ ವಿಭಾಗ ಸೇರಿದಂತೆ ಎಲ್ಲೆಡೆ ಬಯೋಮೆಟ್ರಿಕ್ ಸಾಧನಗಳನ್ನು ಅಳವಡಿಸಲಾಗಿದೆ. ಇದರಿಂದ ಕೈದಿಗಳ ಮೊಬೈಲ್ ಬಳಕೆ ಹಾಗೂ ನಿಷೇಧಿತ ವಸ್ತುಗಳ ಚಲನವಲನಕ್ಕೆ ತಡೆ ಬೀಳುವ ನಿರೀಕ್ಷೆ ಮೂಡಿದೆ.