
ಉಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶದನುಸಾರ ಮತ್ತು ಪಾಲಿಕೆ ಮುಖ್ಯ ಆಯುಕ್ತರು ಬಿಬಿಎಂಪಿ ರವರ ಆದೇಶದಂತೆ ಜಯನಗರ ವಾಣಿಜ್ಯ ಸಂಕೀರ್ಣದ 9ನೇ ಮುಖ್ಯರಸ್ತೆ, 10ನೇ ಮುಖ್ಯಸ್ತೆ ಹಾಗೂ 27ನೇ ಅಡ್ಡರಸ್ತೆ, 27ನೇ ಎ ಅಡ್ಡರಸ್ತೆ, 30ನೇ ಅಡ್ಡರಸ್ತೆ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಗಿದ್ದು, ಪಾದಚಾರಿ ಮಾರ್ಗದಲ್ಲಿ ಇಟ್ಟಿರುವ ಅನಧಿಕೃತ ಪೆಟ್ಟಿಗೆ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಲಾಯಿತು.

ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ 32 ಅಂಗಡಿ ಮಳಿಗೆಯನ್ನು, ತಳ್ಳುವ ಗಾಡಿ, ಹಣ್ಣಿನ ವ್ಯಾರಿಗಳ ಕಟ್ಟಡ, ಶೆಡ್ ಗಳನ್ನು ಜೆಸಿಬಿ ಮೂಲಕ ತೆರವು ಮಾಡಲಾಯಿತು. ಪಳೆಯುವಳಿಕೆಯನ್ನು ಬೈರಸಂದ್ರದ ಮೈದಾನದಲ್ಲಿ ಸಂಗ್ರಹಿಸಿದ್ದು, ಒಟ್ಟಿಗೆ ಎಲ್ಲವನ್ನೂ ಬೇರೆಡೆಗೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿಸಿದರು.
ಅಂಗಡಿ ಮುಂಗಟ್ಟುಗಳನ್ನು ತೆರವುಗೊಲಿಸುವ ವೇಳೆ ಕೆಲವರು ನಮಗೆ ಬಿಬಿಎಂಪಿಯಿಂದಲೆ ಪರವಾನಿಗೆ ನೀಡಲಾಗಿದೆ, ಕಾಗದ ಪತ್ರಗಳು ಇವೆ, ನಮಗೆ ಮುಂದೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು.
ಕಾರ್ಯಾಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ತಿಳಿಸಲಾಗಿದ್ದರೂ ಕೂಡ ಮೇಲ್ಕಾಣಿಸಿದ ರಸ್ತೆಗಳಲ್ಲಿ ಸುಮಾರು 1.00 ಕೀ. ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಈ ವೇಳೆ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿಗಳು, ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು/ ಸಂಚಾರಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಮಾರ್ಷಲ್‌ಗಳು, ಗ್ಯಾಂಗ್‌ಮನ್‌ಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.