ಇಡೀ ಕುಟುಂಬ ಸದಸ್ಯರ ಅಗತ್ಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಈಡೇರಿಸಲು ಬಯಸುವ, ಕುಟುಂಬ ಸ್ವಾಸ್ಥ್ಯದ ಬಗ್ಗೆ ವಿಶೇಷ ಕಾಳಜಿಯುಳ್ಳ ವ್ಯಕ್ತಿಗಳಿಗೆ ಎಳನೀರು ದಿನನಿತ್ಯದ ಅಗತ್ಯವಾಗಿದೆ. ಯಾವುದೇ ರಾಸಾಯನಿಕಗಳನ್ನು ಒಳಗೊಂಡಿರದ, ಕೃತಕಬಣ್ಣ, ವಾಸನೆಗಳಿಂದ ಮುಕ್ತವಾದ, ಆಬಾಲ ವೃದ್ಧರಿಗೆ ನೀಡಬಹುದಾದ, ಅತ್ಯಂತ ಸುರಕ್ಷಿತ, ಶಕ್ತಿವರ್ಧನೆಯ ಪೇಯ ಈ ಎಳನೀರು.
ಎಳನೀರಿನ ವಿಶೇಷ ಗುಣಗಳು-
- ಯಾವದೇ ಹೊರಗಿನ ಅಂಶಗಳು ಸೇರ್ಪಡೆಯಾಗಲು ಅವಕಾಶವಿಲ್ಲದ ಕಾರಣ ನಿಸರ್ಗದತ್ತವಾಗಿ ಶೇಖರವಾಗಿದ್ದುದರಿಂದ ಇದು ನಿಶ್ಕಲ್ಮಷ.
- ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೆಸಿಫಿಕ್ ಸಾಗರ ಪ್ರದೇಶಗಳಲ್ಲಿ, ಗಾಯಗೊಂಡ ಯೋಧರಿಗೆ ತುರ್ತು ಪ್ಲಾಸ್ಮಾ ನೀಡಿಕೆಗಾಗಿ ನೇರವಾಗಿ ಎಳನೀರನ್ನು ಸೇರಿಸುತ್ತಿದ್ದರೆಂಬುದು ಆಶ್ಚರ್ಯಕರವಾದರೂ ಸತ್ಯವಾಗಿದೆ.
- ಹಾಲಿಗಿಂತ ಕಡಿಮೆ ಕೊಬ್ಬಿನಾಂಶ ಹೊಂದಿದೆ, ಕೊಲೆಸ್ಟ್ರಾಲ್ ಅಂಶದಿಂದ ಸಂಪೂರ್ಣ ಮುಕ್ತವಾಗಿದ್ದು, ಶರೀರಕ್ಕೆ ಅಗತ್ಯವಿರುವ HDL ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ.
- ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್, ಇತರೆ ಖನಿಜಾಂಶಗಳನ್ನು ಹೊಂದಿರುವುದರಿಂದ ಆರೋಗ್ಯದಾಯಕ ಟಾನಿಕ್ ಇದಾಗಿದೆ.
- ಆಹ್ಲಾದಕರ ಪಾನೀಯ ಮತ್ತು ಒಂದು ಬಾಳೆ ಹಣ್ಣಿನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಪೊಟಾಷಿಯಂ ಒಳಗೊಂಡಿದೆ.
- ಆಹ್ಲಾದ, ಶಕ್ತಿನೀಡವ ಪಾನೀಯಗಳಿಗಿಂತ ಕಡಿಮೆ ಸೋಡಿಯಂ ಹೊಂದಿದೆ.
- ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ದೇಹದ ಜಲಾಂಶ ನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ.
- ಸಂಸ್ಕರಿಸಿದ ಸಕ್ಕರೆಗೆ ಬದಲಾಗಿ ನೈಸರ್ಗಿಕ ಸಕ್ಕರೆ ಅಂಶ ಮತ್ತು ರುಚಿ ಹೊಂದಿದೆ.
- ಎಳನೀರನ್ನು ಕುಡಿಯುವುದರಿಂದ ರಕ್ತಸಂಚಾರ ಸರಾಗವಾಗಿ ನಡೆಯುತ್ತದಾದ್ದರಿಂದ ಇದು ಜೀವಜಲವೂ ಹೌದು.
- ಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಹೋದವರ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನವನ್ನು ಕಾಪಾಡುತ್ತದೆ.
- ಯಾರೇ ಕುಡಿದರೂ ಯಾವುದೇ ಅಡ್ಡಪರಿಣಾಮಗಳಿಲ್ಲ.
- ದೂರಪ್ರಯಾಣಿಸುವಾಗ ಎಳನೀರು ಕೆಡುವ ಭಯವಿಲ್ಲ, ಆದರೂ ಗೊಂಚಲಿನಿಂದ ಬೇರ್ಪಡಿಸಿದ ೨೪ ರಿಂದ ೩೬ ಗಂಟೆಗಳವರೆಗೆ ಮಾತ್ರ ಅದರ ತಾಜಾತನವಿರುತ್ತದೆ. ನಂತರ ಫ್ರಿಜ್‌ನಲ್ಲಿ ಇರಿಸಿದರೂ ತಾಜಾತನ ನಾಶವಾಗುತ್ತದೆ.
- ದಿಢೀರ್ ಚೇತೋಹಾರಿ ಮತ್ತು ಅತ್ಯಂತ ಶಕ್ತಿದಾಯಕವಾದ್ದರಿಂದ ಅಶಕ್ತರಿಗೆ ಹೊಸ ಚೈತನ್ಯವನ್ನು ತುಂಬುತ್ತದೆ ಮತ್ತು ಹಣ್ಣಿನ ರಸಗಳಿಗಿಂತಲೂ ಹೆಚ್ಚು ಆರೋಗ್ಯಕರವಾಗಿದೆ.
- ದಿನಪೂರ್ತಿ ಲವಲವಿಕೆಯಿಂದ ಕಾರ್ಯಮಗ್ನವಾಗಿರಲು ಉಪಯುಕ್ತ.
- ಸಂಪೂರ್ಣವಾಗಿ ಔಷಧೀಯ ಗುಣಧರ್ಮಗಳನ್ನು ಒಳಗೊಂಡಿರುವುದರಿಂದ ಎಳನೀರನ್ನು ನಿಯಮಿತವಾಗಿ ಬಳಸಬಹುದು.
- ಎಳನೀರಿನ ಔಷಧೀಯ ಗುಣಗಳು-
- ಮೂತ್ರಲ ಮತ್ತು ಮೂತ್ರದಸೋಂಕನ್ನು ತಡೆಗಟ್ಟುವ ಗುಣ ಹೊಂದಿರುವ ಕಾರಣ ಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ.
- ಕರುಳಿನ ಕಾರ್ಯವನ್ನು ಮತ್ತು ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಿಶುಗಳಲ್ಲಿ ಪಚನಕ್ರಿಯೆಗೆ ಯಾ ಕರುಳಿನ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ.
- ಆ್ಯಂಟಿಫಂಗಲ್, ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.
- ಅತಿಸಾರ\ಭೇದಿಯಿಂದ ಅಥವಾ ಇನ್ನಾವದೇ ಕಾರಣಗಳಿಂದ ಶರೀರದಲ್ಲಿ ನೀರಿನಂಶದ ಕೊರತೆ ನೀಗಿಸಲು ಉಪಯುಕ್ತ. ಅಲ್ಲದೇ ಮಲಬದ್ಧತೆ ನಿವಾರಣೆಗೂ ಸಹಾಯಕ.
- ದೇಹವನ್ನು ತಂಪಾಗಿಸುವ ಗುಣಹೊಂದಿರುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಬೆವರುಸಾಲೆ, ಮೀಸಲ್ಸ್, ದಡಾರಗಳಿಂದ ಉಂಟಾಗುವ ಬೊಬ್ಬೆ (ಗುಳ್ಳೆ)ಗಳಿಗೆ ಎಳನೀರು ಲೇಪಿಸುವುದರಿಂದ ಕಡಿಮೆಯಾಗುತ್ತದೆ.
- ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಮಾಡುತ್ತದೆ.
- ಎಳನೀರಿನಲ್ಲಿರುವ ಸಲೈನ್ ಮತ್ತು ಅಲ್ಬುಮಿನ್ ಕಾಲರಾ ರೋಗಕ್ಕೆ ಅತ್ಯುಪಯುಕ್ತ ಔಷಧಿ.
- ಖನಿಜ ವಿಷವನ್ನು ದೇಹದಿಂದ ಹೊರದಬ್ಬುತ್ತದೆ.