ಬಳ್ಳಾರಿ: ಕರ್ನಾಟಕ ರಾಜಕೀಯದಲ್ಲಿ ಮತ್ತೆ ಒಂದು ‘ಅದ್ಭುತ ಯಾಗ’ದ ಚರ್ಚೆ ಜೋರಾಗಿದೆ. ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಪಟ್ಟಕ್ಕೇರುವ ಬೆನ್ನಲ್ಲೇ, ಅವರಿಗಾಗಿ ಬಳ್ಳಾರಿಯಲ್ಲಿ ನಡೆದಿದ್ದ ವಿಶೇಷ ರಾಜಶ್ಯಾಮಲಾ ಯಾಗ ಇದೀಗ ಭಾರೀ ಕುತೂಹಲ ಮೂಡಿಸಿದೆ.
ಡಿಕೆಶಿ ಅವರ ಆಪ್ತ ವಲಯದ ಮುಖಂಡ ಜೆ.ಎಸ್. ಆಂಜನೇಯಲು ನೇತೃತ್ವದಲ್ಲಿ ಬಳ್ಳಾರಿ ತಾಲೂಕಿನ ಅಮೃತೇಶ್ವರ ದೇವಾಲಯದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ರಾಜಶ್ಯಾಮಲಾ ಯಾಗ ನೆರವೇರಿಸಲಾಗಿತ್ತು. ತಮ್ಮ ಪತ್ನಿಯೊಂದಿಗೆ ಸಂಕಲ್ಪ ಮಾಡಿಕೊಂಡು ಶಾಸ್ತ್ರೋಕ್ತವಾಗಿ ಯಾಗ ನಡೆಸಿದ್ದ ಆಂಜನೇಯಲು, ಡಿಕೆಶಿ ಉನ್ನತ ಸ್ಥಾನಕ್ಕೇರಲಿ ಎಂಬ ಆಶಯ ವ್ಯಕ್ತಪಡಿಸಿದ್ದರು.
ರಾಜಶ್ಯಾಮಲಾ ಯಾಗದ ಜೊತೆಗೆ ಚಂಡಿಕಾ ಯಾಗ, ರುದ್ರಯಾಗ, ಸುದರ್ಶನ ಯಾಗ ಹಾಗೂ ಮಹಾಗಣಪತಿ ಹೋಮ ಕೂಡ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಈ ಮಹಾಯಾಗದಲ್ಲಿ ಹೈದರಾಬಾದ್, ಕೇರಳ ಮತ್ತು ತಮಿಳುನಾಡಿನಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ವೇದ ಪಂಡಿತರು ಮತ್ತು ಋತ್ವಿಜರು ಪಾಲ್ಗೊಂಡಿದ್ದರು.
ರಾಜಕೀಯದಲ್ಲಿ ಅಧಿಕಾರ, ಪ್ರಭಾವ ಮತ್ತು ಶತ್ರು ಸಂಹಾರಕ್ಕಾಗಿ ಹಿಂದಿನ ಕಾಲದಲ್ಲಿ ರಾಜರು ಈ ಯಾಗವನ್ನು ಮಾಡಿಸುತ್ತಿದ್ದರು ಎಂಬ ನಂಬಿಕೆ ಇದೆ. ಈಗ ಅದೇ ಯಾಗ ಆಧುನಿಕ ರಾಜಕೀಯ ವಲಯದಲ್ಲೂ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಹಿಂದೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR), ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಅಧಿಕಾರದ ಮುನ್ನ ಇದೇ ಯಾಗ ಮಾಡಿಸಿದ್ದರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಏನಿದು ರಾಜಶ್ಯಾಮಲಾ ಯಾಗ?
ರಾಜಶ್ಯಾಮಲಾ ಯಾಗವು ದೇವಿ ರಾಜಮಾತಂಗಿಯ ಆರಾಧನೆಗೆ ಸಂಬಂಧಿಸಿದ ಅತ್ಯಂತ ಶಕ್ತಿಶಾಲಿ ಯಾಗವೆಂದು ಪರಿಗಣಿಸಲಾಗುತ್ತದೆ. ಜ್ಞಾನ, ವಾಕ್ಚಾತುರ್ಯ, ಕಲೆ ಹಾಗೂ ನಾಯಕತ್ವದ ಅನುಗ್ರಹಕ್ಕಾಗಿ ಈ ಯಾಗವನ್ನು ಮಾಡಲಾಗುತ್ತದೆ ಎನ್ನಲಾಗಿದೆ.
ಏನು ಫಲ ಸಿಗುತ್ತದೆ?
ರಾಜಕೀಯದಲ್ಲಿ ಯಶಸ್ಸು, ಅಧಿಕಾರ ಪ್ರಾಪ್ತಿ, ಶತ್ರುನಾಶ ಮತ್ತು ಪ್ರಭಾವ ವೃದ್ಧಿಗೆ ಈ ಯಾಗ ಸಹಕಾರಿ ಎಂಬ ನಂಬಿಕೆ ಇದೆ. ಜೊತೆಗೆ ವಿದ್ಯಾರ್ಥಿಗಳು, ಕಲಾವಿದರು, ಉದ್ಯಮಿಗಳು ಹಾಗೂ ಸಾರ್ವಜನಿಕ ಜೀವನದಲ್ಲಿರುವವರಿಗೆ ಜ್ಞಾನ, ಆತ್ಮವಿಶ್ವಾಸ ಮತ್ತು ಆಕರ್ಷಣಾ ಶಕ್ತಿ ಹೆಚ್ಚುತ್ತದೆ ಎಂದು ಭಕ್ತರು ನಂಬುತ್ತಾರೆ.
ಯಾವ ಸಮಯದಲ್ಲಿ ಮಾಡುತ್ತಾರೆ?
ನವರಾತ್ರಿ, ವಸಂತ ಪಂಚಮಿ ಅಥವಾ ವಿಶೇಷ ಶುಭ ಮುಹೂರ್ತಗಳಲ್ಲಿ ಈ ಯಾಗವನ್ನು ಸಾಮಾನ್ಯವಾಗಿ ನೆರವೇರಿಸಲಾಗುತ್ತದೆ. ಗಣಪತಿ ಪೂಜೆ, ನವಗ್ರಹ ಆರಾಧನೆ ಹಾಗೂ ರಾಜಶ್ಯಾಮಲಾ ದೇವಿಯ ವಿಶೇಷ ಮಂತ್ರೋಚ್ಚಾರಗಳೊಂದಿಗೆ ಹೋಮ ವಿಧಾನ ನಡೆಯುತ್ತದೆ.