ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟ ನಿರಾಕರಣೆ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ಪೀಠ ಇಂದು ಅರ್ಜಿಯ ಪ್ರಾಥಮಿಕ ವಾದ ಆಲಿಸಿತು. ಈ ವೇಳೆ ಸಿಜೆಐ, “ಈ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶಿಸುವ ಅಗತ್ಯ ಕಾಣುತ್ತಿಲ್ಲ. ವಿಷಯವನ್ನು ಭಾವನಾತ್ಮಕವಾಗಿ ನೋಡದೆ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡಬೇಕು” ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಸಾಮಾನ್ಯ ನ್ಯಾಯಾಂಗ ಕ್ರಮದಂತೆ ಅರ್ಜಿಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಇನ್ನೊಂದೆಡೆ, ತಮ್ಮ ‘ಜಿರಳೆ’ ರೂಪಕ ಹೇಳಿಕೆ ಕುರಿತು ನಡೆದಿರುವ ವಿವಾದಕ್ಕೂ ಸಿಜೆಐ ಸೂರ್ಯ ಕಾಂತ್ ಸ್ಪಷ್ಟನೆ ನೀಡಿದರು. “ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ನಕಲಿ ಮತ್ತು ಬೋಗಸ್ ಪದವಿಗಳ ಆಧಾರದಲ್ಲಿ ಕಾನೂನು ವೃತ್ತಿಗೆ ನುಗ್ಗುತ್ತಿರುವ ಅಕ್ರಮ ವ್ಯವಸ್ಥೆಯನ್ನು ಟೀಕಿಸಲು ಮಾತ್ರ ಆ ಪದ ಬಳಸಿದ್ದೆ. ನಿರುದ್ಯೋಗಿ ಯುವಕರನ್ನು ಉದ್ದೇಶಿಸಿ ಹೇಳಿಲ್ಲ,” ಎಂದು ಅವರು ತಿಳಿಸಿದರು. ಮಾಧ್ಯಮಗಳು ಹಾಗೂ ಮೀಮ್ ಪೇಜ್‌ಗಳು ಹೇಳಿಕೆಯನ್ನು ಸಂದರ್ಭದಿಂದ ಬೇರ್ಪಡಿಸಿ ಹರಡುತ್ತಿರುವುದರ ಬಗ್ಗೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಕೀಲ ರಾಜಾ ಚೌಧರಿ ಸಲ್ಲಿಸಿದ್ದ ಈ PILನಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ ಚಟುವಟಿಕೆಗಳು ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ಕಾನೂನು ಪದವಿ ಜಾಲದ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಜೊತೆಗೆ, ಸುಪ್ರೀಂ ಕೋರ್ಟ್ ವಿಚಾರಣೆಗಳ ನೇರ ಪ್ರಸಾರದ ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಕತ್ತರಿಸಿ ಮೀಮ್ಸ್ ರೂಪದಲ್ಲಿ ವಾಣಿಜ್ಯ ಮತ್ತು ವೈಯಕ್ತಿಕ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ತಕ್ಷಣ ಕಾನೂನು ತರಬೇಕು ಎಂಬ ಬೇಡಿಕೆಯೂ ಮಾಡಲಾಗಿದೆ.