ತಿರುವನಂತಪುರಂ: ಎರ್ನಾಕುಳಂ ಜಿಲ್ಲೆಯ ಅಂಕಮಾಲಿಯ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಇಂದು (ಮೇ 1) ಮದಮತ್ತಗೊಂಡ ಆನೆಯೊಂದು ಅಟ್ಟಹಾಸ ಮೆರೆದಿದೆ. ಆನೆಯ ತುಳಿತಕ್ಕೆ ಸಿಲುಕಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮಾವುತನ ಸ್ಥಿತಿ ಆತಂಕಕಾರಿಯಾಗಿದೆ.
ಅಕ್ಕಪಕ್ಕದ ದೇವಸ್ಥಾನಗಳ ಉತ್ಸವದಲ್ಲಿ ಭಾಗವಹಿಸಲು ‘ಮಯ್ಯನಾಡ್ ಪಾರ್ಥಸಾರಥಿ’ ಎಂಬ ಆನೆಯನ್ನು ಕರೆತರಲಾಗಿತ್ತು. ಇಂದು ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಆನೆಯನ್ನು ಸ್ನಾನ ಮಾಡಿಸಲು ಕಿದಂಗೂರ್ ದೇವಸ್ಥಾನಕ್ಕೆ ತಂದಾಗ ಅದು ಏಕಾಏಕಿ ಮದವೇರಿ ಆಕ್ರೋಶ ತೋರಲು ಆರಂಭಿಸಿತು. ಆನೆಯನ್ನು ಲಾರಿಯಲ್ಲಿ ಕರೆತಂದ ಕೊಲ್ಲಂ ಮೂಲದ ವಿಷ್ಣು ಅವರು ಅದನ್ನು ನಿಯಂತ್ರಿಸಲು ಮುಂದಾದಾಗ, ಆನೆ ಅವರ ಮೇಲೆರಗಿ ತುಳಿದು ಕೊಂದಿದೆ.
ಆನೆಯ ಎರಡನೇ ಮಾವುತ ಪ್ರದೀಪ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಅಂಕಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ಮೂರು ಗಂಟೆಗಳ ಕಾಲ ಆನೆಯ ಅಟ್ಟಹಾಸದಿಂದ ದೇವಸ್ಥಾನದ ಆವರಣ ರಣರಂಗದಂತಾಗಿದ್ದು, ಅಲ್ಲಿ ನಿಂತಿದ್ದ ಕಾರುಗಳು ಹಾಗೂ ದ್ವಿಚಕ್ರ ವಾಹನಗಳನ್ನು ಆನೆ ಧ್ವಂಸಗೊಳಿಸಿದೆ. ಆನೆಯ ಆಕ್ರೋಶದಿಂದ ಭಯಗೊಂಡ ಭಕ್ತರು ಹಾಗೂ ಸ್ಥಳೀಯರು ಜೀವ ಉಳಿಸಿಕೊಳ್ಳಲು ಅತ್ತಿತ್ತ ಓಡಿಹೋಗಿದ್ದಾರೆ. ಘಟನೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ತ್ವರಿತ ಪ್ರತಿಕ್ರಿಯಾ ತಂಡ ಮತ್ತು ಪಶುವೈದ್ಯರು ನಿರಂತರ ಕಾರ್ಯಾಚರಣೆ ನಡೆಸಿ, ಮಧ್ಯಾಹ್ನ 12:30ರ ವೇಳೆಗೆ ಆನೆಗೆ ಅರಿವಳಿಕೆ ಮದ್ದು ನೀಡಿ ಅದನ್ನು ಕೊನೆಗೂ ನಿಯಂತ್ರಣಕ್ಕೆ ತಂದಿದ್ದಾರೆ.