ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ನಡೆದ ಘಟನೆಯಲ್ಲಿ, ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ (16586) ರೈಲಿನಲ್ಲೇ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ನೈರುತ್ಯ ರೈಲ್ವೆಯ ಮೈಸೂರು ವಿಭಾಗ ನೀಡಿದ ವಿವರಗಳ ಪ್ರಕಾರ, ರೈಲು ಸಂಜೆ 7:22ರ ಸುಮಾರಿಗೆ ಬಂಟ್ವಾಳ ತಲುಪಿದಾಗ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಮ್ಮ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾದರು. ಸಹ ಪ್ರಯಾಣಿಕರು ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆದರೆ ವೈದ್ಯರು ಆಗಮಿಸುವ ಮುನ್ನವೇ ಮಹಿಳೆ ರೈಲಿನಲ್ಲೇ ಹೆರಿಗೆ ಮಾಡಿಕೊಂಡರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್‌ಗಳಾದ ಅರುಣಾ ಎಸ್.ಎಸ್. ಮತ್ತು ಶಂಕರಮೂರ್ತಿ ಚುರುಕಾಗಿ ಸ್ಪಂದಿಸಿ ತಾಯಿ ಹಾಗೂ ಮಗುವಿನ ಆರೈಕೆಯನ್ನು ನೋಡಿಕೊಂಡರು. ಬಳಿಕ ಇಬ್ಬರನ್ನೂ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆ ಮುಂದುವರಿದಿದೆ. ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಸಿಬ್ಬಂದಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.