ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ (Bengaluru Grenade Case) ಪ್ರಕರಣದಲ್ಲಿ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. ನಗರದಲ್ಲಿ 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಆರ್‌ಟಿ ನಗರದ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2023ರಲ್ಲಿ ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಪತ್ತೆಹಚ್ಚಿದ್ದರು. ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ದಾಳಿ ನಡೆಸಿ ಶಸ್ತ್ರಾಸ್ತ್ರಗಳು, ವಾಕಿ ಟಾಕಿ ಹಾಗೂ ನಕ್ಷೆಗಳನ್ನು ಜಪ್ತಿ ಮಾಡಿತ್ತು. ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡು ತನಿಖೆ ಮುಂದುವರಿಸಿತು. ಬೆಂಗಳೂರು ಸ್ಫೋಟದ ರೂವಾರಿ ಟಿ. ನಾಜೀರ್ ಜೊತೆ ಆರೋಪಿಗಳು ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಜೈಲಿನಲ್ಲಿ ನಾಜೀರ್‌ನಿಂದ ಉಗ್ರವಾದಕ್ಕೆ ಪ್ರೇರಣೆ ದೊರೆತಿತ್ತು ಎಂದು ತಿಳಿದುಬಂದಿದೆ. ಜೈಲಿನಿಂದ ಹೊರಬಂದ ಬಳಿಕ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ. 2023ರಲ್ಲಿ ಸಂಚು ನಡೆಯುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಎ1 ಟಿ ನಾಜೀರ್, ಎ2 ಜುನೈದ್, ಎ3 ಸೈಯಾದ್ ಸುಹೈಲ್ ಖಾನ್, ಎ4 ಮಹಮ್ಮದ್ ಉಮರ್, ಎ5 ಜಾಹಿದ್ ತಬ್ರೇಜ್, ಎ6 ಸೈಯದ್, ಎ7 ಮುದಾಸೀರ್ ಪಾಷಾ, ಎ8 ಮಹಮ್ಮದ್ ಫಜೀದ್, ಎ9 ಅನೀಸ್ ಫಾತೀಮ್, ಎ10 ಚಾನ್ ಪಾಷಾ, ಎ11 ವೈದ್ಯ ಡಾ. ನಾಗರಾಜ್ ಬಂಧನವಾಗಿದೆ. ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಎನ್‌ಐಎ ಪರವಾಗಿ SPP ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಎನ್‌ಐಎ ವಿಶೇಷ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನದ ನಂತರ ಎನ್‌ಐಎ ಕೋರ್ಟ್ ತೀರ್ಪು ಪ್ರಕಟಿಸಲಿದೆ.