ಬೆಂಗಳೂರು, ಏ.29: ಹಲವು ದಿನಗಳಿಂದ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಬೇಡಿಕೆಗಳ ವಿಚಾರವಾಗಿ ತೀವ್ರ ಗೊಂದಲಗಳು ಉಂಟಾಗಿದ್ದು, ಇದರ ಹಿನ್ನೆಲೆ ಪ್ರತಿಭಟನೆಗಳೂ ನಡೆದಿದ್ದವು. ಇದೀಗ ನೌಕರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಗುಡ್ ನ್ಯೂಸ್ ಸಿಕ್ಕಿದೆ. ದೀರ್ಘಕಾಲದ ನಿರೀಕ್ಷೆಯ ಬಳಿಕ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಬಾಕಿ ವೇತನ ಹಿಂಬಾಕಿ ಪಾವತಿಸಲು ಮೊದಲ ಹಂತದಲ್ಲಿ ₹450 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ನೌಕರರಿಗೆ ಕಳೆದ 26 ತಿಂಗಳ ವೇತನ ಬಾಕಿಯಾಗಿ ಒಟ್ಟು ₹1,271.92 ಕೋಟಿ ಪಾವತಿಸಬೇಕಿದ್ದು, ಪ್ರಸ್ತುತ ಹಣಕಾಸಿನ ಲಭ್ಯತೆಯನ್ನು ಗಮನದಲ್ಲಿಟ್ಟು ಮೊದಲ ಕಂತಾಗಿ ₹450 ಕೋಟಿ ಬಿಡುಗಡೆ ಮಾಡಲಾಗಿದೆ.
ನಿಗಮವಾರು ಹಣ ಹಂಚಿಕೆ ವಿವರ ಹೀಗಿದೆ: ಕೆಎಸ್‌ಆರ್‌ಟಿಸಿ (KSRTC)ಗೆ ₹143.85 ಕೋಟಿ, ಬಿಎಂಟಿಸಿ (BMTC)ಗೆ ₹137.24 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ (NWKRTC)ಗೆ ₹87 ಕೋಟಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ (KKRTC)ಗೆ ₹81.91 ಕೋಟಿ ಬಿಡುಗಡೆ ಮಾಡಲಾಗಿದೆ.
ಈ ಅನುದಾನವು ನೌಕರರ ಆರ್ಥಿಕ ಸಂಕಷ್ಟವನ್ನು ಭಾಗಶಃ ತಗ್ಗಿಸುವ ನಿರೀಕ್ಷೆಯಿದ್ದು, ಉಳಿದ ಮೊತ್ತವನ್ನು ಮುಂದಿನ ಹಂತಗಳಲ್ಲಿ ಬಿಡುಗಡೆ ಮಾಡುವುದಾಗಿ ಸೂಚಿಸಲಾಗಿದೆ. ಮೊದಲ ಹಂತದ ಹಣ ಬಿಡುಗಡೆಯನ್ನು ಸ್ವಾಗತಿಸಿದ ನೌಕರರ ಒಕ್ಕೂಟಗಳು, ಇನ್ನೂ ಬಾಕಿ ಇರುವ ಸುಮಾರು ₹821.92 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿವೆ. ಸರ್ಕಾರ ಸಮಯಕ್ಕೆ ಸರಿಯಾಗಿ ಸಂಪೂರ್ಣ ಹಣ ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯೂ ಕೇಳಿಬಂದಿದೆ.