ರಾಮನಗರ: ರಾತ್ರಿವೇಳೆಯಲ್ಲಿ ಮನೆ ಬಾಗಿಲಿಗೇ ಬಂದ ಕಾಡಾನೆಗಳನ್ನು ನೋಡಿ ಮನೆ ಮಾಲೀಕ ಬೆಚ್ಚಿಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದೊಡ್ಡೇಗೌಡ ಅವರ ಮನೆ ಸಮೀಪ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಮನೆಯ ಕಾಂಪೌಂಡ್ ಒಳಗೆ ಬೆಳೆದಿದ್ದ ಬಾಳೆ ಹಾಗೂ ಪಪ್ಪಾಯ ಬೆಳೆಗಳನ್ನು ತಿಂದು ಹಾನಿ ಮಾಡಿವೆ. ಬಳಿಕ ಅವು ಕಾಡಿನತ್ತ ಮರಳಿವೆ.
ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಪದೇಪದೇ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಕಾಡಾನೆಗಳು ರೈತರ ಬೆಳೆ ನಾಶ ಮಾಡುವುದರ ಜೊತೆಗೆ ಮನೆಗಳಿಗೂ ಹಾನಿ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆಗಳ ದಾಂಧಲೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಗ್ರಾಮಸ್ಥರು, ವೀಡಿಯೋ ಸಹಿತ ಅರಣ್ಯ ಇಲಾಖೆಗೆ ದೂರು ನೀಡಿ, ಈ ಹಾವಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.