ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಗೆ ಕೊನೆಗೂ ಚಲನೆ ಸಿಕ್ಕಿದ್ದು, ಜೂನ್ 14ರಿಂದ 24ರೊಳಗೆ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯುಕ್ತ ಜಿ.ಎ ಸಂಗ್ರೇಶಿ ಸೂಚನೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದ ಮಹತ್ವದ ಸಭೆ ಇಂದು ನಡೆಯಿತು. ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಭೆಗೆ ಗೈರಾಗಿದ್ದ ಹಿನ್ನೆಲೆ, ರಾಜ್ಯ ಚುನಾವಣಾ ಆಯುಕ್ತ ಜಿ.ಎ ಸಂಗ್ರೇಶಿ ನೇತೃತ್ವದಲ್ಲಿ ಸಭೆ ನಡೆಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ಜಿ.ಎ ಸಂಗ್ರೇಶಿ, ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಪ್ರಕಟಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು. ರಾಜ್ಯ ಚುನಾವಣಾ ಆಯೋಗ ಹಾಗೂ ಜಿಬಿಎ ಸಮಾಲೋಚನೆಯ ಬಳಿಕವೇ ದಿನಾಂಕ ನಿಗದಿಯಾಗಬೇಕೆಂಬ ಕಾನೂನು ಇರುವ ಕಾರಣ ಸಭೆ ನಡೆಸಲಾಗಿದೆ ಎಂದರು.
ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ದಿನಾಂಕ ನಿಗದಿ ಮಾತ್ರ ಬಾಕಿಯಿದೆ ಎಂದು ಜಿಬಿಎ ತಿಳಿಸಿದೆ. ಜನಗಣತಿ, ಮನೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯಗಳ ಹಿನ್ನೆಲೆ ವೇಳಾಪಟ್ಟಿ ಪರಿಶೀಲಿಸಿ ದಿನಾಂಕ ನಿಗದಿ ಮಾಡಲು ಸೂಚಿಸಲಾಗಿದೆ. ಆದರೆ ಜೂನ್ 30ರೊಳಗೆ ದಿನಾಂಕ ಘೋಷಣೆ ಮಾಡಲೇಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಈ ಕುರಿತ ಮಾಹಿತಿ ಸಲ್ಲಿಸಬೇಕಿರುವುದರಿಂದ ನಿಗದಿತ ಅವಧಿಯೊಳಗೆ ದಿನಾಂಕ ಪ್ರಕಟಿಸುವಂತೆ ಸೂಚಿಸಲಾಗಿದೆ. ಆದರೆ ಚುನಾವಣೆ ಮುಂದೂಡುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕಿಲ್ಲ. ಜೂನ್ 14ರಿಂದ 24ರೊಳಗೆ ದಿನಾಂಕ ನಿಗದಿ ಮಾಡುವಂತೆ ಮಾತ್ರ ಸೂಚಿಸಿದ್ದೇವೆ ಎಂದು ಸಂಗ್ರೇಶಿ ಸ್ಪಷ್ಟಪಡಿಸಿದರು.
ಇನ್ನೊಂದೆಡೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಚುನಾವಣೆಗೆ ಅಗತ್ಯವಿರುವ RO, AERO ಹಾಗೂ BLOಗಳ ನೇಮಕಾತಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿದ್ದರೆ ಅವುಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.