ಬೆಂಗಳೂರು: ಬಹುಕಾಲದಿಂದ ನಿರೀಕ್ಷಿಸಲಾಗುತ್ತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಗಡುವಿನೊಳಗೆ ಪೂರ್ಣಗೊಳಿಸಲು ಹೆಚ್ಚುವರಿ ಕಾರ್ಮಿಕರು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಗುತ್ತಿಗೆದಾರ ಸಂಸ್ಥೆ ಬಿಎಸ್‌ಪಿಸಿಎಲ್‌ಗೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ನಡೆಯುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕಾಮಗಾರಿ ವೇಗ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಮಡಿವಾಳ ಭಾಗದ ರ್ಯಾಂಪ್ ಕಾಮಗಾರಿ ಪ್ರದೇಶದಲ್ಲಿರುವ ಬೆಸ್ಕಾಂನ ರಿಂಗ್ ಮೇನ್ ಯೂನಿಟ್ ಅನ್ನು 24 ಗಂಟೆಗಳೊಳಗೆ ಸ್ಥಳಾಂತರಿಸಬೇಕು ಹಾಗೂ ಕೇಂದ್ರೀಯ ಸದನದ ಎದುರಿನ ಮೂರು ಮರಗಳನ್ನು ನಾಲ್ಕು ದಿನಗಳೊಳಗೆ ತೆರವುಗೊಳಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಗಡುವು ವಿಧಿಸಿದರು.
ದೊಮ್ಮಲೂರು ಭಾಗದ ಡೌನ್-ರ್ಯಾಂಪ್ ಕಾಮಗಾರಿ ಈಗಾಗಲೇ ಶೇಕಡಾ 70ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಹೆಚ್ಚುವರಿ ಮಾನವ ಸಂಪನ್ಮೂಲ ಬಳಸಿ ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಇದೇ ವೇಳೆ ಸರ್ಜಾಪುರ ಭಾಗದ ಡೌನ್-ರ್ಯಾಂಪ್ ನಿರ್ಮಾಣ ಕಾರ್ಯವನ್ನೂ ತ್ವರಿತಗೊಳಿಸಿ, ನಿಗದಿತ 15 ದಿನಗಳೊಳಗೆ ಮುಗಿಸುವಂತೆ ಆದೇಶಿಸಲಾಗಿದೆ. ಈಜಿಪುರ ಸಿಗ್ನಲ್ ಜಂಕ್ಷನ್ ಸಮೀಪ ನಾಲ್ಕು ಸ್ಪ್ಯಾನ್‌ಗಳ ಜೋಡಣೆ ಕಾರ್ಯ ಆರಂಭವಾಗಿದ್ದು, ಅದನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆ ಸಂಸ್ಥೆಗೆ ತಿಳಿಸಿದರು.
ಇದರ ಜೊತೆಗೆ ಐದು ಪೋರ್ಟಲ್ ಫ್ರೇಮ್‌ಗಳ ಕಾಮಗಾರಿಯನ್ನು ಶೀಘ್ರ ಮುಗಿಸಿ, ಸಂಪೂರ್ಣ ಮೇಲ್ಸೇತುವೆ ಯೋಜನೆಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ, ಫ್ಲೈಓವರ್ ಕಾಮಗಾರಿ ಪ್ರದೇಶದ ಸುತ್ತಮುತ್ತ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಪ್ರದೇಶದ ಪಕ್ಕದ ರಸ್ತೆಗಳಲ್ಲಿನ ಗುಂಡಿಗಳನ್ನು ತಕ್ಷಣ ಮುಚ್ಚಬೇಕು ಹಾಗೂ ಮಳೆನೀರು ಸುಗಮವಾಗಿ ಹರಿದು ಹೋಗಲು ಚರಂಡಿಗಳಲ್ಲಿನ ಹೂಳನ್ನು ಸಂಪೂರ್ಣ ತೆರವುಗೊಳಿಸುವಂತೆ ಆದೇಶಿಸಿದರು.
ಮಳೆಗಾಲದ ಅವಧಿಯಲ್ಲಿ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಮತ್ತು ರಸ್ತೆ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟು 2.59 ಕಿಲೋಮೀಟರ್ ಉದ್ದದ ಈಜಿಪುರ ಮೇಲ್ಸೇತುವೆ ಯೋಜನೆಗೆ ಅಗತ್ಯವಿರುವ 762 ಸೆಗ್ಮೆಂಟ್‌ಗಳಲ್ಲಿ ಈಗಾಗಲೇ 731 ಸೆಗ್ಮೆಂಟ್‌ಗಳ ತಯಾರಿಕೆ ಪೂರ್ಣಗೊಂಡಿದ್ದು, ಉಳಿದ ಸೆಗ್ಮೆಂಟ್‌ಗಳ ಕಾಸ್ಟಿಂಗ್ ಕಾರ್ಯ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಒಟ್ಟು 66 ಸ್ಪ್ಯಾನ್‌ಗಳ ಪೈಕಿ ಈಗಾಗಲೇ 52 ಸ್ಪ್ಯಾನ್‌ಗಳ ಅಳವಡಿಕೆ ಕಾಮಗಾರಿ ಮುಗಿದಿದ್ದು, ಉಳಿದ 14 ಸ್ಪ್ಯಾನ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. ಅಕ್ಟೋಬರ್ ವೇಳೆಗೆ ಸಂಪೂರ್ಣ ಮೇಲ್ಸೇತುವೆಯನ್ನು ಸಾರ್ವಜನಿಕ ಬಳಕೆಗೆ ತೆರೆಯುವ ಗುರಿಯೊಂದಿಗೆ ಕಾಮಗಾರಿ ವೇಗವಾಗಿ ಸಾಗುತ್ತಿದೆ.