ಮಂಗಳೂರು: ದೈವದ ಭಂಡಾರ (Daiva Bhandara) ಮೆರವಣಿಗೆಯ ವೇಳೆ ಕಾಲು ಸಂಕ (Foot Bridge) ಕುಸಿದು ಬಿದ್ದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನ ಪುಚ್ಚೆಮೊಗರು ಬಾವದಬೈಲು ಪ್ರದೇಶದಲ್ಲಿ 8 ಮಂದಿ ಗಾಯಗೊಂಡ ಘಟನೆ ನಡೆದಿದೆ.
ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿಸುತ್ತಿದ್ದಾಗ ಕಾಲು ಸಂಕ ಏಕಾಏಕಿ ಕುಸಿದು ಪಲ್ಲಕ್ಕಿ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಂಬು, ಕಹಳೆ ಹಾಗೂ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದ ವೇಳೆ ಕಾಲು ಸಂಕದ ಮೇಲೆ ಬಂದಾಗ ಅದು ಏಕಾಏಕಿ ಮುರಿದು ಬಿದ್ದಿದೆ. ಈ ದುರಂತದಲ್ಲಿ ಸುನಿಲ್ ಶೆಟ್ಟಿ (ಮುಕಾಲ್ದಿ, ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರನ್ನೂ ಒಳಗೊಂಡು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಕಾಲು ಸಂಕ ಕುಸಿತದಿಂದ ಕಲ್ಲಿನ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ ಗಾಯಗಳಾಗಿವೆ. ಪಲ್ಲಕ್ಕಿಯಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ.