ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭ್ಯವಾಗಿದೆ. ಬಿಎಂಟಿಸಿ ಶೀಘ್ರದಲ್ಲೇ ಹೊಸ ಪ್ರಿಪೇಯ್ಡ್ ಕಾರ್ಡ್ ಪರಿಚಯಿಸಲು ಸಜ್ಜಾಗಿದೆ. ಮೆಟ್ರೋ ಕಾರ್ಡ್ ಮಾದರಿಯಲ್ಲಿ ಕ್ಯಾಶ್‌ಲೆಸ್ ಪ್ರಯಾಣ ಸಾಧ್ಯವಾಗುವ ರಿಚಾರ್ಜ್ ಮಾಡಬಹುದಾದ ಪ್ರಿಪೇಯ್ಡ್ ಕಾರ್ಡ್ ಇದಾಗಿದೆ.
ಚಿಲ್ಲರೆ ತೊಂದರೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗದ್ದಲದ ನಡುವೆ ಟಿಕೆಟ್ ಪಡೆಯುವ ಸಮಸ್ಯೆ ಇನ್ನು ಇರಲ್ಲ. ಕ್ಯೂಆರ್ ವಂಚನೆಗೂ ಕಡಿವಾಣ ಬೀಳಲಿದೆ. ಪ್ರಯಾಣಿಕರು ಪ್ರಿಪೇಯ್ಡ್ ಕಾರ್ಡ್ ಪಡೆದು ಬಸ್‌ನಲ್ಲಿ ಸುಲಭವಾಗಿ ಬಳಸಬಹುದು. ಕಾರ್ಡ್ ಅನ್ನು ಮಷಿನ್‌ಗೆ ಟ್ಯಾಪ್ ಮಾಡಿದ ತಕ್ಷಣವೇ ಪ್ರಯಾಣ ದರ ಕಡಿತವಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಟಿಕೆಟ್ ಲಭ್ಯವಾಗುತ್ತದೆ. ಈ ರೀತಿಯ ಸೌಲಭ್ಯವನ್ನು ಜಾರಿಗೆ ತರುವತ್ತ ಬಿಎಂಟಿಸಿ ಹೆಜ್ಜೆ ಹಾಕಿದೆ. ಎಲ್ಲವೂ ಯೋಜನೆಯಂತೆ ನಡೆದರೆ, ಜೂನ್ ತಿಂಗಳಲ್ಲಿ ಈ ವ್ಯವಸ್ಥೆ ಆರಂಭವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಬಿಎಂಟಿಸಿ ಸಿಟಿಎಂ ರಾಜೇಶ್ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಮೆಟ್ರೋದಲ್ಲಿ ಈಗಾಗಲೇ ರಿಚಾರ್ಜ್ ಮಾಡಬಹುದಾದ ಕಾರ್ಡ್ ವ್ಯವಸ್ಥೆ ಇದೆ. ಅದೇ ರೀತಿಯಲ್ಲಿ ಬಿಎಂಟಿಸಿಯಲ್ಲೂ ಪ್ರಿಪೇಯ್ಡ್ ಕಾರ್ಡ್ ಜಾರಿಗೆ ತರಲು ನಿರ್ಧಾರವಾಗಿದೆ. ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಯೂ ಇದೆ. ಆದರೆ ಸ್ಮಾರ್ಟ್ ಕಾರ್ಡ್ ಹಾಗೂ ಪ್ರಿಪೇಯ್ಡ್ ಕಾರ್ಡ್ ಎರಡೂ ವಿಭಿನ್ನವಾಗಿದ್ದು, ಜೂನ್‌ನಲ್ಲಿ ವಿತರಣೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಪ್ರಿಪೇಯ್ಡ್ ಕಾರ್ಡ್ ದರ ಮತ್ತು ಲಭ್ಯತೆ:
-
ಕಾರ್ಡ್ ದರ ಸುಮಾರು ₹50 ಆಗಿರಲಿದೆ
-
ಕನಿಷ್ಠ ರೀಚಾರ್ಜ್ ₹50, ಗರಿಷ್ಠ ಬ್ಯಾಲೆನ್ಸ್ ₹10,000
-
ವ್ಯಾಲಿಡಿಟಿ 3 ವರ್ಷ, ಬಳಕೆ ಮುಂದುವರೆದರೆ ಸ್ವಯಂ ನವೀಕರಣ
-
ಟಿಟಿಎಂಸಿ ಕೇಂದ್ರಗಳಾದ ಮೆಜೆಸ್ಟಿಕ್, ಶಾಂತಿನಗರ, ಶಿವಾಜಿನಗರ, ಯಶವಂತಪುರ ಸೇರಿದಂತೆ ಕಂಡಕ್ಟರ್ ಮುಖಾಂತರವೂ ಕಾರ್ಡ್ ಲಭ್ಯ
ಹೇಗೆ ಕಾರ್ಯನಿರ್ವಹಿಸುತ್ತದೆ?
-
TTMC ಕೌಂಟರ್‌ನಲ್ಲಿ ಆಧಾರ್ ಹಾಗೂ ರೀಚಾರ್ಜ್ ಮೊತ್ತ ನೀಡಿ ಕಾರ್ಡ್ ಪಡೆಯಬಹುದು
-
ಬಸ್‌ಗೆ ಹತ್ತಿದ ಬಳಿಕ ಕಂಡಕ್ಟರ್ ETM ಯಂತ್ರಕ್ಕೆ ಕಾರ್ಡ್ ಟ್ಯಾಪ್ ಮಾಡಿದರೆ, ಪ್ರಯಾಣದ ದರ ಸ್ವಯಂ ಕಡಿತವಾಗಿ ಟಿಕೆಟ್ ತಕ್ಷಣ ಸಿಗುತ್ತದೆ