ಲಕ್ನೋ: ಭಾರೀ ಗಾಳಿ ಮತ್ತು ಮಳೆಗೆ ತುತ್ತಾಗಿ ಬೆಟ್ಟಾ ನದಿಯ ಮೇಲಿನ ನಿರ್ಮಾಣ ಹಂತದ ಸೇತುವೆ (Hamirpur Bridge Collapse) ಕುಸಿದ ಪರಿಣಾಮ 6 ಕಾರ್ಮಿಕರು ಸಾವನ್ನಪ್ಪಿರುವ ದುರ್ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸುತ್ತಿದ್ದ ಸೇತುವೆಯೇ ಈಗ ಕಾರ್ಮಿಕರ ಜೀವ ಕಸಿದಿದೆ. ದುರಂತದಲ್ಲಿ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಬಹುದೆಂಬ ಆತಂಕ ವ್ಯಕ್ತವಾಗಿದೆ. ರಕ್ಷಣಾ ಪಡೆಗಳು ಮತ್ತು ಸ್ಥಳೀಯ ಆಡಳಿತ ಸಿಬ್ಬಂದಿ ಸ್ಥಳದಲ್ಲೇ ಶಿಬಿರ ಹೂಡಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಹಮೀರ್‌ಪುರದ (Hamirpur) ಮೋರಾ ಕಂದರ್ ಹಾಗೂ ಕುರಾರಾ ಭಾಗಗಳನ್ನು ಸಂಪರ್ಕಿಸಲು ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಗುರುವಾರ (ಮೇ 28) ತಡರಾತ್ರಿ ಬೀಸಿದ ಬಿರುಗಾಳಿಯಿಂದ ಸೇತುವೆಯ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದಿದೆ. ಪರಿಣಾಮ ಕಾಮಗಾರಿ ನಡೆಸುತ್ತಿದ್ದ 6 ಕಾರ್ಮಿಕರು ಮೃತಪಟ್ಟಿದ್ದಾರೆ.
ಸೇತುವೆ ಕುಸಿತ ದುರಂತದ ಬಗ್ಗೆ ಮುಖ್ಯಮಂತ್ರಿ Yogi Adityanath ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ವೇಗಗೊಳಿಸಬೇಕು ಎಂದು ಸೂಚಿಸಿರುವ ಅವರು, ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವಂತೆ ಆದೇಶ ನೀಡಿದ್ದಾರೆ.