ಬೆಂಗಳೂರು: ನಗರದ ನಾಗರಬಾವಿಯ ರಿಂಗ್‌ರೋಡ್ ಬಳಿಯ ಸರ್ವಿಸ್ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಿಬ್ಬಂದಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡರಾತ್ರಿ ಕಾಣಿಸಿಕೊಂಡ ಬೆಂಕಿ
ನಾಗರಬಾವಿಯ ರಿಂಗ್‌ರೋಡ್ ಬಳಿಯ ಸರ್ವಿಸ್ ರಸ್ತೆಯಲ್ಲಿರುವ ಶಾಸಗಿ ಹೋಟೆಲ್‌ನಲ್ಲಿ ನಿನ್ನೆ ತಡರಾತ್ರಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಹಾಗೂ ವಾಸವಿದ್ದ ಸುಮಾರು 8 ಮಂದಿ ಸಿಬ್ಬಂದಿ ಕಟ್ಟಡದ ಮೇಲ್ಮಹಡಿಯಲ್ಲಿ ಸಿಲುಕಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮಹಡಿಯನ್ನು ಆವರಿಸಿದ್ದು, ದಟ್ಟ ಹೊಗೆಯಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಮೂವರು ಮಾತ್ರ ಪಾರಾಗಿದ್ದಾರೆ.
ಅಗ್ನಿ ಅವಘಡಕ್ಕೆ ಓರ್ವ ಸಿಬ್ಬಂದಿ ಬಲಿ
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದೆ. ಬಳಿಕ ಭೀಮಾ, ಶಿವಾನಂದ, ಸತೀಶ್ ಹಾಗೂ ರಾಜಕುಮಾರ್ ಸೇರಿದಂತೆ ಐವರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 45 ವರ್ಷದ ರಾಜಕುಮಾರ್ ಮೃತಪಟ್ಟಿದ್ದು, ಉಳಿದ ನಾಲ್ವರು ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ
ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.