E-PAPER
13 Nov 2026, 08:21:32 PM|
Gold₹13793/gGold24K ₹13,793/g - 22K ₹12,633/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕರ್ನಾಟಕಕ್ಕೆ ಮೋದಿ ಕೊಡುಗೆ ಏನು? ರಾಜ್ಯದಿಂದ ಕಿತ್ತುಕೊಂಡಿದ್ದೆಷ್ಟು, ನೀಡಿದ್ದೆಷ್ಟು : ಬಿ.ಕೆ.ಹರಿಪ್ರಸಾದ್ ಪ್ರಶ್ನೆ

ಬೆಂಗಳೂರು : ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ, ಬರ ಪರಿಹಾರ, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕವು ದೇಶದ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ನವೋದ್ಯಮ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಕೈಗಾರಿಕೆ ಹಾಗೂ ಆವಿಷ್ಕಾರಗಳ ಮೂಲಕ ಭಾರತದ ಆರ್ಥಿಕತೆಗೆ ಶಕ್ತಿ ತುಂಬುತ್ತಿದೆ. ದೇಶದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಕೊಡುಗೆ ನೀಡುತ್ತಿರುವ ಹೆಮ್ಮೆಯ ಕರ್ನಾಟಕಕ್ಕೆ ದೇಶದ ಮಹಾಮಾನವ, ನಕಲಿ ವಿಶ್ವಗುರು, ಅಭಿವೃದ್ಧಿಯ ಸ್ವಯಂಘೋಷಿತ ಹರಿಕಾರ, ಜೈವಿಕ ಹುಟ್ಟಿಲ್ಲ ಎಂದು ಘೋಷಿಸಿಕೊಂಡ ನರೇಂದ್ರ ಮೋದಿಯವರಿಗೆ ಸ್ವಾಗತ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿಯಾಗಿ 12 ವರ್ಷಗಳನ್ನು ಪೂರೈಸಿ 13ನೇ ವರ್ಷಕ್ಕೆ ಕಾಲಿಟ್ಟಿರುವ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಸಂವಾದ ನಡೆಸಲು ಕನ್ನಡಿಗರ ಬಳಿ ನೂರಾರು ಪ್ರಶ್ನೆಗಳಿವೆ. ಆದರೆ ಕನ್ನಡಿಗರೊಂದಿಗೆ ಚರ್ಚೆ ನಡೆಸುವುದು ಬಿಡಿ, ಪತ್ರಿಕಾಗೋಷ್ಠಿ ನಡೆಸಲೂ ಪ್ರಧಾನಿಗೆ ಧೈರ್ಯವಿಲ್ಲ ಎಂಬುದು ನಮಗೆ ಗೊತ್ತಿದೆ. ಆದ್ದರಿಂದ ಸದ್ಯಕ್ಕೆ ಹತ್ತು ಪ್ರಶ್ನೆಗಳನ್ನು ಮಾತ್ರ ಕೇಳುತ್ತಿದ್ದೇವೆ. ಸಾಧ್ಯವಾದರೆ ತಮ್ಮ ಎಂದಿನ ಟೆಲಿಪ್ರಾಂಪ್ಟರ್ ಭಾಷಣದಲ್ಲಾದರೂ ಉತ್ತರ ಕೊಡಿ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

1. ದೇಶದ ಖಜಾನೆ ತುಂಬಲು ಕರ್ನಾಟಕ ಬೇಕು, ತೆರಿಗೆ ಪಾಲು ಕೊಡಲು ಕರ್ನಾಟಕ ಬೇಡವೇ? :

ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡುವ ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂಬುದು ರಾಜ್ಯದ ನಿರಂತರ ಆಕ್ಷೇಪವಾಗಿದೆ. ಕನ್ನಡಿಗರ ತೆರಿಗೆ ಹಣದಿಂದ ದೇಶದ ಅಭಿವೃದ್ಧಿಯ ಭಾಷಣ ಮಾಡುವ ಪ್ರಧಾನಿಯವರು ಕರ್ನಾಟಕದ ಹಣಕಾಸು ಹಿತಾಸಕ್ತಿಯನ್ನು ಕಾಪಾಡಲು ಯಾವ ಕ್ರಮ ಕೈಗೊಂಡಿದ್ದಾರೆ? ರಾಜ್ಯದ ನ್ಯಾಯಯುತ ಅನುದಾನದ ಬೇಡಿಕೆಗಳಿಗೆ ಸ್ಪಷ್ಟ ಉತ್ತರ ನೀಡುತ್ತಾರೆಯೇ? ದೇಶಕ್ಕೆ ಕೊಡುಗೆ ನೀಡುವಾಗ ಕರ್ನಾಟಕ ಶ್ರೀಮಂತ ರಾಜ್ಯ, ಕೇಂದ್ರದಿಂದ ಪಡೆಯುವಾಗ ಮಾತ್ರ ಅನಾಥ ರಾಜ್ಯವೇ ಎಂದು ಪ್ರಶ್ನಿಸಿದ್ದಾರೆ.

2. ಕರ್ನಾಟಕದ ರೈತರು ಬರದಿಂದ ತತ್ತರಿಸುತ್ತಿದ್ದರೂ ನಿಮ್ಮ ಕೇಂದ್ರ ಸರ್ಕಾರಕ್ಕೆ ಕರುಣೆ ಇಲ್ಲವೇ? :

ಕರ್ನಾಟಕ ಹಿಂದೆಂದೂ ಕಾಣದ ಭೀಕರ ಬರಗಾಲ ಎದುರಿಸಿದ್ದು, 226 ತಾಲೂಕುಗಳು ಬರಪೀಡಿತವಾಗಿವೆ. 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 62,482 ಕೋಟಿ ರೂ. ನಷ್ಟ ಸಂಭವಿಸಿದೆ. ರಾಜ್ಯ ಸರ್ಕಾರ 22,400.58 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಿದ್ದರೂ ರೈತರು ಪರಿಹಾರಕ್ಕಾಗಿ ಕಾಯುವಂತಾಗಿದೆ. ಚುನಾವಣೆಯ ಸಂದರ್ಭದಲ್ಲಿ ರೈತರನ್ನು ಅನ್ನದಾತರು ಎಂದು ಕರೆಯುವ ಪ್ರಧಾನಿಯವರಿಗೆ ಸಂಕಷ್ಟದಲ್ಲಿರುವ ರೈತರ ನೆನಪಾಗುತ್ತಿಲ್ಲವೇ? ರೈತರ ಕಣ್ಣೀರು ಒರೆಸಲು ಇನ್ನೆಷ್ಟು ಮನವಿಗಳು ಬೇಕು? ಪರಿಹಾರದ ಹಣ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

3. ಬಜೆಟ್‌ನಲ್ಲಿ ಘೋಷಿಸಿದ 5,300 ಕೋಟಿ ಹಣ ಕೇವಲ ಭಾಷಣಕ್ಕೆ ಸೀಮಿತವೇ? :

2023–24ರ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೆರವು ಘೋಷಿಸಿದ್ದರೂ ಮೂರು ವರ್ಷಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ಮತ್ತೊಂದೆಡೆ ಮೇಕೆದಾಟು ಯೋಜನೆಗೆ ಅನುಮತಿಗಳು ಬಾಕಿ ಉಳಿದಿವೆ. ಮಹದಾಯಿ–ಕಳಸಾ ಬಂಡೂರಿ ಯೋಜನೆಯ ಅನುಮತಿ ಪ್ರಕ್ರಿಯೆ ಹಾಗೂ ಕೃಷ್ಣಾ ನ್ಯಾಯಮಂಡಳಿಯ ತೀರ್ಪಿನ ಅಧಿಸೂಚನೆ ಕುರಿತು ಅನಿಶ್ಚಿತತೆ ಮುಂದುವರಿದಿದೆ. ಕರ್ನಾಟಕದ ರೈತರಿಗೆ ನೀರು ಕೊಡುವುದಕ್ಕಿಂತ ನೀರಾವರಿ ಯೋಜನೆಗಳ ಹೆಸರಿನಲ್ಲಿ ಭಾಷಣ ಮಾಡುವುದೇ ಹೆಚ್ಚು ಇಷ್ಟವೇ? ಘೋಷಿಸಿದ ಹಣ ಹಾಗೂ ಬಾಕಿ ಅನುಮತಿಗಳ ಕುರಿತು ಕಾಲಮಿತಿ ನೀಡುತ್ತೀರಾ ಎಂದು ಕೇಳಿದ್ದಾರೆ.

4. ಬೆಂಗಳೂರಿನಿಂದ ದೇಶಕ್ಕೆ ಆದಾಯ ಬೇಕು, ಬೆಂಗಳೂರಿನ ಅಭಿವೃದ್ಧಿಗೆ ಹಣ ಕೊಡಲು ಮನಸ್ಸಿಲ್ಲವೇ? :

ದೇಶದ ಐಟಿ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದಿದೆ. ಆದರೆ ಸಂಚಾರ ದಟ್ಟಣೆ, ಕುಡಿಯುವ ನೀರು, ಮೆಟ್ರೋ ವಿಸ್ತರಣೆ, ಉಪನಗರ ರೈಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ನೆರವಿನ ಅಗತ್ಯವಿದೆ. ರಾಜ್ಯ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಬೇಡಿಕೆಗೆ ಕೇಂದ್ರದ ಉತ್ತರವೇನು? ಬೆಂಗಳೂರಿನ ಸಾಧನೆಗಳನ್ನು ತಮ್ಮ ಸರ್ಕಾರದ ಸಾಧನೆಗಳೆಂದು ಬಿಂಬಿಸಿಕೊಳ್ಳುವ ಪ್ರಧಾನಿಯವರಿಗೆ ನಗರದ ಸಮಸ್ಯೆಗಳ ಬಗ್ಗೆ ಕೇಂದ್ರದ ಜವಾಬ್ದಾರಿ ಇಲ್ಲವೇ? ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕೇಂದ್ರ ಅನುದಾನ ನೀಡಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

5. ಜಲಜೀವನ್ ಮಿಷನ್ ಎಂದರೆ ಜಾಹೀರಾತಿನಲ್ಲಿ ನೀರು, ಹಳ್ಳಿಗಳಲ್ಲಿ ಅನುದಾನಕ್ಕೆ ಬರವೇ? :

ಮನೆಮನೆಗೆ ಕುಡಿಯುವ ನೀರು ತಲುಪಿಸುವ ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರದ ಪಾಲಿನ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರ ಪದೇಪದೇ ಆಕ್ಷೇಪ ವ್ಯಕ್ತಪಡಿಸಿದೆ. ಗ್ರಾಮ ಪಂಚಾಯಿತಿಗಳಿಗೆ ಹಣಕಾಸು ಆಯೋಗದ ಅನುದಾನ ಬಿಡುಗಡೆ ಕುರಿತೂ ಪ್ರಶ್ನೆಗಳಿವೆ. ಯೋಜನೆಗೆ ಪ್ರಧಾನಿಯವರ ಹೆಸರು, ಜಾಹೀರಾತಿಗೆ ಅವರ ಭಾವಚಿತ್ರವಿದ್ದರೂ ಹಣಕಾಸಿನ ಹೊರೆ ರಾಜ್ಯ ಸರ್ಕಾರದ ಮೇಲೆಯೇ ಏಕೆ? ಕೇಂದ್ರದ ಬಾಕಿ ಪಾಲನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಕೇಳಿದ್ದಾರೆ.

6. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಎಲ್ಲಿ ಹೋಯಿತು, ಪ್ರಧಾನಿಯವರೇ? :

2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿರುವ ಅವರು, ಕರ್ನಾಟಕದ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಬ್ಬಿಗೆ ನ್ಯಾಯಯುತ ಎಫ್ಆರ್ಪಿ ನಿಗದಿಪಡಿಸುವ ಅಧಿಕಾರ ಹೊಂದಿರುವ ಕೇಂದ್ರ ಸರ್ಕಾರ ರೈತರ ಸಂಕಷ್ಟಕ್ಕೆ ಯಾವ ಪರಿಹಾರ ನೀಡಿದೆ? ತೆಂಗು ಮತ್ತು ಅಡಿಕೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೃಷಿ ಉತ್ಪಾದನಾ ವೆಚ್ಚ ಏರುತ್ತಲೇ ಇದೆ. ರೈತರ ಆದಾಯ ದ್ವಿಗುಣವಾಗದಿದ್ದರೂ ಅವರ ಸಾಲ, ಸಂಕಷ್ಟ ಮತ್ತು ಹೋರಾಟಗಳು ದ್ವಿಗುಣವಾಗಿವೆ. ಇದೇನಾ ನಿಮ್ಮ ಅಚ್ಛೇ ದಿನ್ ಎಂದು ಟೀಕಿಸಿದ್ದಾರೆ.

7. ಕರ್ನಾಟಕದ ರೈಲ್ವೆ ಮತ್ತು ಕೈಗಾರಿಕಾ ಯೋಜನೆಗಳು ಘೋಷಣೆಯ ಹಳಿಯಲ್ಲೇ ನಿಂತಿರುವುದೇಕೆ? :

ಬೆಂಗಳೂರು ಉಪನಗರ ರೈಲು ಯೋಜನೆ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ ಪ್ರಸ್ತಾವನೆ, ಹೈಸ್ಪೀಡ್ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಕರಾವಳಿ ಮೂಲಸೌಕರ್ಯ ಯೋಜನೆಗಳ ಪ್ರಗತಿ ಬಗ್ಗೆಯೂ ಕನ್ನಡಿಗರಿಗೆ ಸ್ಪಷ್ಟ ಉತ್ತರ ಬೇಕಿದೆ. ರೈಲು ಯೋಜನೆಗಳ ಘೋಷಣೆ, ಶಂಕುಸ್ಥಾಪನೆ ಮತ್ತು ಜಾಹೀರಾತುಗಳಿಗೆ ಇರುವ ವೇಗ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಯಾಕಿಲ್ಲ? ಕರ್ನಾಟಕಕ್ಕೆ ಸಂಬಂಧಿಸಿದ ಬಾಕಿ ಯೋಜನೆಗಳ ಪೂರ್ಣಗೊಳಿಸುವ ದಿನಾಂಕಗಳನ್ನು ಪ್ರಕಟಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

8. ಇಂದಿರಾ ಗಾಂಧಿಯವರ ಕಾಲದಲ್ಲಿ ನಿರ್ಮಾಣಗೊಂಡ ಮಂಗಳೂರು ಬಂದರು ಖಾಸಗಿಯವರ ಕೈಗೆ ಒಪ್ಪಿಸಿರುವುದೇಕೆ? :

ಮಂಗಳೂರು ಬಂದರು ಸೇರಿದಂತೆ ಕರ್ನಾಟಕದ ಕರಾವಳಿಯ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಖಾಸಗಿ ಕಂಪನಿಗಳ ಪಾತ್ರ ಹೆಚ್ಚುತ್ತಿರುವುದನ್ನು ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಖಾಸಗಿಯವರಿಗೆ ವಹಿಸುವುದರಿಂದ ಸ್ಥಳೀಯ ಮೀನುಗಾರರು, ಕಾರ್ಮಿಕರು ಹಾಗೂ ಸಣ್ಣ ಉದ್ಯಮಿಗಳಿಗೆ ಯಾವ ಪ್ರಯೋಜನವಾಗಿದೆ? ಸಾರ್ವಜನಿಕ ಆಸ್ತಿಗಳ ಮೇಲೆ ಖಾಸಗಿ ಕಂಪನಿಗಳ ಹಿಡಿತ ಹೆಚ್ಚಿಸುವುದೇ ಅಭಿವೃದ್ಧಿಯ ಮಾದರಿಯೇ? ದೇಶದ ಆಸ್ತಿಗಳನ್ನು ನಿರ್ಮಿಸಿದವರನ್ನು ನಿಂದಿಸಿ, ನಿರ್ಮಿಸಿದ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವುದೇ ಆತ್ಮನಿರ್ಭರ ಭಾರತದ ಅರ್ಥವೇ ಎಂದು ಟೀಕಿಸಿದ್ದಾರೆ.

9. ಮಂಗಳೂರು ವಿಮಾನ ನಿಲ್ದಾಣ ಮತ್ತು ಕನ್ನಡಿಗರ ಬ್ಯಾಂಕುಗಳನ್ನು ಮಾರಿದ್ದೇಕೆ ? :

ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹಕ್ಕೆ ವಹಿಸಿದ್ದೀರಿ. ಕರ್ನಾಟಕದ ಹೆಮ್ಮೆಯ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ, ಹಾಜಿ ಅಬ್ದುಲ್ಲಾ ಸ್ಥಾಪಿಸಿದ ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲಾಗಿದೆ. ಕರ್ನಾಟಕದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನೂ ವಿಲೀನಗೊಳಿಸಲಾಗಿದೆ. ಕನ್ನಡಿಗರು ಕಟ್ಟಿದ ಸಂಸ್ಥೆಗಳ ಸ್ವತಂತ್ರ ಗುರುತನ್ನು ಅಳಿಸುವುದೇ ಅಭಿವೃದ್ಧಿಯ ಮಾದರಿಯೇ? ಈ ವಿಲೀನಗಳಿಂದ ಸ್ಥಳೀಯ ಉದ್ಯೋಗ, ಗ್ರಾಮೀಣ ಬ್ಯಾಂಕಿಂಗ್ ಸೇವೆ ಹಾಗೂ ಕರ್ನಾಟಕದ ಆರ್ಥಿಕ ಹಿತಾಸಕ್ತಿಗೆ ಆಗಿರುವ ಪರಿಣಾಮಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

10. E20 ಎಥೆನಾಲ್ ಹೆಸರಿನಲ್ಲಿ ವಾಹನ ಸವಾರರಿಗೆ '420' ಮಾಡುವುದೇ ನಿಮ್ಮ ಹೊಸ ಅಭಿವೃದ್ಧಿ ಮಾದರಿಯೇ? 

ಪೆಟ್ರೋಲ್ ನಲ್ಲಿ ಶೇ.20 ಎಥೆನಾಲ್ ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆಯೂ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರೀಕ್ಷೆಯಲ್ಲಿ ಕೆಲವು ಪೆಟ್ರೋಲ್ ಮಾದರಿಗಳಲ್ಲಿ ಶೇ.26ರಿಂದ 31ರವರೆಗೆ ಎಥೆನಾಲ್ ಇರುವುದಾಗಿ ವರದಿಯಾಗಿದೆ. ಆದರೆ ಕೇಂದ್ರ ಸರ್ಕಾರ ಈ ಫಲಿತಾಂಶಗಳನ್ನು ತಿರಸ್ಕರಿಸಿದೆ. ಹಾಗಾದರೆ ಸ್ವತಂತ್ರ ಸಂಸ್ಥೆಯ ಮೂಲಕ ಜಂಟಿ ಪರೀಕ್ಷೆ ನಡೆಸಿ ಸತ್ಯವನ್ನು ಬಹಿರಂಗಪಡಿಸಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇ20 ಬಳಕೆಯಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹಾಗಿದ್ದರೆ ಮೈಲೇಜ್ ಕಡಿಮೆಯಾದರೂ ಪೆಟ್ರೋಲ್ ಬೆಲೆಯಲ್ಲಿ ಗ್ರಾಹಕರಿಗೆ ಅನುಗುಣವಾದ ರಿಯಾಯಿತಿ ಏಕೆ ಇಲ್ಲ? ಹಳೆಯ ವಾಹನಗಳ ಮಾಲೀಕರಿಗೆ ರಕ್ಷಣೆ ಮತ್ತು ಪರಿಹಾರದ ವ್ಯವಸ್ಥೆ ಏಕೆ ಇಲ್ಲ? ಗ್ರಾಹಕರು ಪೂರ್ಣ ಬೆಲೆ ಪಾವತಿಸಿ ಮೈಲೇಜ್ ನಷ್ಟವನ್ನೂ ಸಹಿಸಬೇಕೇ? ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸರ್ಕಾರ ಪ್ರಚಾರ ಪಡೆಯಬೇಕೇ? ಇದು ಇ20 ನೀತಿಯೇ ಅಥವಾ ಜನಸಾಮಾನ್ಯರ ಜೇಬಿಗೆ ಬೀಳುತ್ತಿರುವ ‘420’ ಹೊಡೆತವೇ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯವರೇ, ನಿಮ್ಮ ಅಸಹಕಾರದ ನಡುವೆಯೂ ಕರ್ನಾಟಕ ದೇಶದಲ್ಲೇ ಮಾದರಿ ರಾಜ್ಯವಾಗಿ ಎದ್ದು ನಿಂತಿದೆ. ಕೇಂದ್ರದ ಅನ್ಯಾಯ ಮತ್ತು ನಿರ್ಲಕ್ಷ್ಯದ ನಡುವೆಯೂ ಅಪೌಷ್ಟಿಕತೆ ಹಾಗೂ ಹಸಿವು ಮುಕ್ತ ರಾಜ್ಯವಾಗುವತ್ತ ಮುನ್ನಡೆಯುತ್ತಿದೆ. ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ಘನತೆಯ ಹಾಗೂ ಸ್ವಾಭಿಮಾನದ ಬದುಕು ನೀಡಿದೆ. ಐಟಿ-ಬಿಟಿ, ಕಾನೂನು ಸುವ್ಯವಸ್ಥೆ, ನೀರಾವರಿ ಮತ್ತು ರೈತರ ಸಬಲೀಕರಣದಲ್ಲಿ ರಾಜಿರಹಿತ ಅಭಿವೃದ್ಧಿ ಸಾಧಿಸಿದೆ. ದುರ್ಬಲರು ಮತ್ತು ಶೋಷಿತರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ಕಾರ್ಯಯೋಜನೆಯನ್ನು ಇಡೀ ದೇಶ ಅನುಸರಿಸುತ್ತಿದೆ. ಇದನ್ನೇ ಕರ್ನಾಟಕ ಮಾದರಿ ಎನ್ನುತ್ತೇವೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಕರ್ನಾಟಕ ಮಾದರಿಗೆ ಕೇಂದ್ರದ ಕೊಡುಗೆ ಏನು? ಮೋದಿಯವರೇ, ನೀವು ಕರ್ನಾಟಕದಿಂದ ಕಿತ್ತುಕೊಂಡಿದ್ದೆಷ್ಟು? ನೀಡಿದ್ದೆಷ್ಟು? ಈ ಪ್ರಶ್ನೆಗಳಿಗೆ ಉತ್ತರ ನೀಡಿ ಕರ್ನಾಟಕಕ್ಕೆ ವಿದಾಯ ಹೇಳುವಿರಾ ಎಂದು ಬಿ.ಕೆ. ಹರಿಪ್ರಸಾದ್ ತಮ್ಮ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ 15,600 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆಮಂಗಳೂರು–ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಪೂರ್ಣ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ವಿಶ್ವದ ಮೊದಲ ‘COSMOS-Mysuru’ ತಾರಾಲಯ ಲೋಕಾರ್ಪಣೆಗೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಮೈಸೂರಿನಲ್ಲಿ ‘ಭಾರತ ವನ’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗಕ್ಕೆ ಅವಕಾಶ ನೀಡುತ್ತಿಲ್ಲ : ಈಶ್ವರ್‌ ಖಂಡ್ರೆ ಅಸಮಾಧಾನತುಂಗಭದ್ರಾ ಕಾಲುವೆಗಳಿಗೆ ನ.20 ರವರೆಗೆ ನೀರು ಹರಿಸುತ್ತೇವೆ : ಶಿವರಾಜ ತಂಗಡಗಿಮೆಟ್ರೋ ಯೋಜನೆಗಳ ಆರ್ಥಿಕ ಹೊರೆ ಕೇಂದ್ರ-ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಲಿ: ಸಿಎಂ ಡಿ.ಕೆ.ಶಿವಕುಮಾರ್ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ