E-PAPER
13 Nov 2026, 08:21:29 PM|
Gold₹13793/gGold24K ₹13,793/g - 22K ₹12,633/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯದಲ್ಲಿ 15,600 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಪರ್ಕ ವ್ಯವಸ್ಥೆ, ರೈಲ್ವೆ, ಮೆಟ್ರೋ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದ 15,600 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು. ಕೆಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರೆ, ಇನ್ನು ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಹೊಸ ವಂದೇ ಭಾರತ್ ರೈಲಿಗೂ ಹಸಿರು ನಿಶಾನೆ ತೋರಿದರು.

ಶುಕ್ರವಾರ ನಗರದ ಐಐಎಂ ಬೆಂಗಳೂರು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಮೆಟ್ರೋ, ರೈಲ್ವೆ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದ ಯೋಜನೆಗಳು ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಯಾವುದೇ ರಾಷ್ಟ್ರದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವು ಉದ್ಯೋಗ, ಕೈಗಾರಿಕೆ ಹಾಗೂ ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು.

ಅಭಿವೃದ್ಧಿಯ ಅವಕಾಶಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿದಾಗ ಬಡತನದ ವಿರುದ್ಧದ ಹೋರಾಟ ಮತ್ತಷ್ಟು ಬಲಗೊಳ್ಳುತ್ತದೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಮ್ಮ ಮೆಟ್ರೋಗೆ ಐತಿಹಾಸಿಕ ಮೈಲುಗಲು :

ಇಂದು ಉದ್ಘಾಟನೆಗೊಂಡ ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ನಗರದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಿದೆ. ಈ ಮಾರ್ಗದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಂ ಬೆಂಗಳೂರು), ವಿವಿಧ ಶಿಕ್ಷಣ ಸಂಸ್ಥೆಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು, ತಂತ್ರಜ್ಞಾನ ಉದ್ಯಮಗಳು ಹಾಗೂ ವ್ಯಾಪಾರ ವಲಯಗಳಿಗೆ ಸುಲಭ ಸಂಪರ್ಕ ದೊರೆಯಲಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರ ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದು ಮೋದಿ ತಿಳಿಸಿದರು.

2014ರಲ್ಲಿ ಕೇವಲ 17 ಕಿ.ಮೀ. ವ್ಯಾಪ್ತಿಯಲ್ಲಿದ್ದ ಬೆಂಗಳೂರಿನ ಮೆಟ್ರೋ ಜಾಲ ಇಂದು 100 ಕಿ.ಮೀ. ಗಡಿ ದಾಟಿದೆ. ದಿಲ್ಲಿ-ಎನ್‍ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ಬಳಿಕ ಈ ಸಾಧನೆ ಮಾಡಿದ ದೇಶದ ಮೂರನೇ ನಗರ ಬೆಂಗಳೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಮೆಟ್ರೋ ಯಶಸ್ಸು ಕೇವಲ ಒಂದು ಯೋಜನೆಯ ಸಾಧನೆಯಲ್ಲ, ಜನರ ಜೀವನಮಟ್ಟ ಸುಧಾರಿಸುವ ಮತ್ತು ಪ್ರಯಾಣವನ್ನು ಸುಗಮಗೊಳಿಸುವ ಹೊಸ ಭಾರತದ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.

ರೈಲ್ವೆ ಕ್ಷೇತ್ರದಲ್ಲಿ ಹೊಸ ಬದಲಾವಣೆ :

ಭಾರತೀಯ ರೈಲ್ವೆ ವಸಾಹತುಶಾಹಿ ಕಾಲದ ಮನಸ್ಥಿತಿಯಿಂದ ಹೊರಬಂದು ದೇಶದ ಸ್ವಂತ ಗುರುತನ್ನು ಪ್ರತಿಬಿಂಬಿಸುವ ಹೊಸ ವ್ಯವಸ್ಥೆಯತ್ತ ಸಾಗುತ್ತಿದೆ. ವಂದೇ ಭಾರತ್ ರೈಲುಗಳು ಮತ್ತು ಅಮೃತ್ ಭಾರತ್ ನಿಲ್ದಾಣಗಳು ಈ ಬದಲಾವಣೆಯ ಸಂಕೇತಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಳೆದ 10 ರಿಂದ 12 ವರ್ಷಗಳಲ್ಲಿ ದೇಶದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಾಗಿದ್ದು, ಕರ್ನಾಟಕಕ್ಕೆ ಮೀಸಲಾದ ಅನುದಾನ ಒಂಭತ್ತು ಪಟ್ಟು ಹೆಚ್ಚಾಗಿದೆ. ಇಂದು ರಾಜ್ಯಕ್ಕೆ ನಾಲ್ಕು ಅಮೃತ್ ಭಾರತ್ ನಿಲ್ದಾಣಗಳು ಹಾಗೂ ಹಳಿ ದ್ವಿಗುಣೀಕರಣ ಮತ್ತು ವಿದ್ಯುದೀಕರಣಕ್ಕೆ ಸಂಬಂಧಿಸಿದ ಎರಡು ಯೋಜನೆಗಳನ್ನು ಸಮರ್ಪಿಸಲಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.

ಇತ್ತೀಚೆಗಷ್ಟೇ ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಲಭಿಸಿದ್ದು, ಇದೀಗ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ಮತ್ತೊಂದು ವಂದೇ ಭಾರತ್ ರೈಲನ್ನು ಸಮರ್ಪಿಸಲಾಗಿದೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದ ಪ್ರಯಾಣಿಕರಿಗೆ ಈ ರೈಲು ಪ್ರಯಾಣದ ಹೊಸ ಅನುಭವ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂಧನ ಭದ್ರತೆಗೆ ಆದ್ಯತೆ :

ಇರಾನ್ ಮತ್ತು ಗಲ್ಫ್ ಪ್ರದೇಶದ ಸುತ್ತಮುತ್ತ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯು ಇಂಧನ ಭದ್ರತೆಯ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ಒಂದು ದಶಕದಲ್ಲಿ ಭಾರತ ಕೈಗೊಂಡ ದೂರದೃಷ್ಟಿಯ ಕ್ರಮಗಳಿಂದ ಇಂತಹ ಸವಾಲಿನ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.

ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ಉತ್ಪಾದನೆ ಹೆಚ್ಚಳ, ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯ ವಿಸ್ತರಣೆ, ಸೌರ, ಜಲ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಉತ್ತೇಜನ ಹಾಗೂ ರೈಲ್ವೆ ವಿದ್ಯುದೀಕರಣದಂತಹ ಕ್ರಮಗಳು ದೇಶದ ಇಂಧನ ಭದ್ರತೆಯನ್ನು ಬಲಪಡಿಸಿವೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ ಮೂರು ಪ್ರಮುಖ ಇಂಧನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರು ಎಲ್‍ಪಿಜಿ ಯೋಜನೆಯಿಂದ 80 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಲಭ್ಯವಾಗಲಿದೆ. ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್ ಮೂಲಕ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಪೂರೈಕೆ ವ್ಯವಸ್ಥೆ ಸುಧಾರಿಸಲಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಸಂಕುಚಿತ ಜೈವಿಕ ಅನಿಲ (ಸಿಬಿಜಿ) ಘಟಕವು ಪ್ರತಿದಿನ 13 ಟನ್ ಜೈವಿಕ ಅನಿಲ ಉತ್ಪಾದಿಸಲಿದೆ. ಇದರಿಂದ ತ್ಯಾಜ್ಯ ನಿರ್ವಹಣೆ ಸುಧಾರಿಸುವುದರ ಜೊತೆಗೆ ನೈಸರ್ಗಿಕ ಅನಿಲ ಆಮದಿಗೆ ವ್ಯಯಿಸುವ ಹಣವೂ ಉಳಿತಾಯವಾಗಲಿದೆ ಎಂದು ನರೇಂದ್ರ ಮೋದಿ ಹೇಳಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಉತ್ತೇಜನ :

ಚಿಪ್‍ನಿಂದ ಹಡಗು ನಿರ್ಮಾಣದವರೆಗೆ, ಕೃತಕ ಬುದ್ಧಿಮತ್ತೆ(ಎಐ), ಡೇಟಾ ಸೆಂಟರ್ ಗಳಿಂದ ಕ್ವಾಂಟಮ್ ಕಂಪ್ಯೂಟಿಂಗ್‍ವರೆಗೆ ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವ ಸಾಧಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಇದಕ್ಕೆ ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆ ಅತ್ಯಗತ್ಯವಾಗಿದೆ. ಸ್ವಚ್ಛ ಇಂಧನ ಗುರಿ ಸಾಧಿಸಲು ಅಣು ವಿದ್ಯುತ್ ಉತ್ಪಾದನೆಯನ್ನೂ ವಿಸ್ತರಿಸಲಾಗುತ್ತಿದೆ. ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 300 ಗಿಗಾವ್ಯಾಟ್ ದಾಟಿದೆ ಎಂದು ಪ್ರಧಾನಿ ತಿಳಿಸಿದರು.

ಕೇಂದ್ರ ಸರಕಾರದ ಯೋಜನೆಗಳು ಜನರನ್ನು ಕೇವಲ ವಿದ್ಯುತ್ ಗ್ರಾಹಕರನ್ನಾಗಿ ಉಳಿಸದೆ, ವಿದ್ಯುತ್ ಉತ್ಪಾದಕರನ್ನಾಗಿಯೂ ರೂಪಿಸುತ್ತಿವೆ. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ದೇಶಾದ್ಯಂತ 60 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಿವೆ. ಕರ್ನಾಟಕದಲ್ಲಿಯೇ 40 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿವೆ. ಪ್ರತಿ ಕುಟುಂಬಕ್ಕೆ ಸುಮಾರು 80 ಸಾವಿರ ರೂ. ಗಳಷ್ಟು ಕೇಂದ್ರ ಸರಕಾರದ ನೆರವು ದೊರೆತಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕರ್ನಾಟಕದ ರೈತರಿಗೆ ಎಂಟು ಲಕ್ಷಕ್ಕೂ ಹೆಚ್ಚು ಸೌರ ಪಂಪ್‍ಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ರೈತರಿಗೆ ಹೆಚ್ಚುವರಿ ಆದಾಯ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕದ ಅನ್ನದಾತರು ಈಗ ಊರ್ಜಾದಾತರಾಗಿಯೂ ಹೊರಹೊಮ್ಮುತ್ತಿದ್ದಾರೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ನವ ಮಧ್ಯಮ ವರ್ಗದ ಆಕಾಂಕ್ಷೆಗಳಿಗೆ ಆದ್ಯತೆ :

2014ರ ನಂತರದ ಸರಕಾರದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಂಕಲ್ಪದಡಿ ಅಭಿವೃದ್ಧಿ ಯೋಜನೆಗಳ ಅನುಷ್ಠಾ ನ, ಜನರ ಸಹಭಾಗಿತ್ವ ಮತ್ತು ತೆರಿಗೆ ಹಣದ ಸಮರ್ಪಕ ಬಳಕೆಗೆ ಆದ್ಯತೆ ನೀಡಲಾಗಿದೆ. ಇದರ ಪರಿಣಾಮವಾಗಿ ಮಧ್ಯಮ ವರ್ಗ ವಿಸ್ತರಿಸಿದ್ದು, ಹೊಸ ಆಕಾಂಕ್ಷೆಯ ವರ್ಗವೊಂದು ರೂಪುಗೊಂಡಿದೆ ಎಂದು ಪ್ರಧಾನಿ ಹೇಳಿದರು.

ಈ ವರ್ಗವು ಗೃಹೋಪಯೋಗಿ ವಸ್ತುಗಳು, ದ್ವಿಚಕ್ರ ವಾಹನಗಳು, ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಇದರಿಂದ ವಾಹನೋದ್ಯಮ, ಎಲೆಕ್ಟ್ರಾನಿಕ್ಸ್, ಪ್ರವಾಸೋದ್ಯಮ ಮತ್ತು ಸೇವಾ ವಲಯಗಳಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯುತ್ತಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನವ ಮಧ್ಯಮ ವರ್ಗದ ಹಿತಾಸಕ್ತಿ ಕೇಂದ್ರ ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸಿ, ಅವರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.

ವಾರ್ಷಿಕ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರು ಮತ್ತು ಬಾಡಿಗೆ ಆದಾಯ ಹೊಂದಿರುವವರಿಗೆ ಅನುಕೂಲವಾಗುವಂತೆ ಟಿಡಿಎಸ್ ನಿಯಮಗಳ ಪರಿಷ್ಕರಣೆ ಹಾಗೂ ಜನಸಾಮಾನ್ಯರ ದೈನಂದಿನ ಬಳಕೆಯ ವಸ್ತುಗಳ ಬೆಲೆ ಇಳಿಕೆಗೆ ಪೂರಕವಾದ ಜಿಎಸ್‍ಟಿ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ. ಅಲ್ಲದೇ, ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಗಳ ಮೇಲಿನ ಜಿಎಸ್‍ಟಿಯನ್ನು ರದ್ದುಗೊಳಿಸುವ ಮೂಲಕ ವಿಮಾ ಸೇವೆಗಳನ್ನು ಜನರಿಗೆ ಇನ್ನಷ್ಟು ಕೈಗೆಟುಕುವಂತೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಡಾ.ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿಸೂರ್ಯ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ 15,600 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆಮಂಗಳೂರು–ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಪೂರ್ಣ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ವಿಶ್ವದ ಮೊದಲ ‘COSMOS-Mysuru’ ತಾರಾಲಯ ಲೋಕಾರ್ಪಣೆಗೆ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಮೈಸೂರಿನಲ್ಲಿ ‘ಭಾರತ ವನ’ ಯೋಜನೆಗೆ ನಿರ್ಮಲಾ ಸೀತಾರಾಮನ್ ಚಾಲನೆಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗಕ್ಕೆ ಅವಕಾಶ ನೀಡುತ್ತಿಲ್ಲ : ಈಶ್ವರ್‌ ಖಂಡ್ರೆ ಅಸಮಾಧಾನತುಂಗಭದ್ರಾ ಕಾಲುವೆಗಳಿಗೆ ನ.20 ರವರೆಗೆ ನೀರು ಹರಿಸುತ್ತೇವೆ : ಶಿವರಾಜ ತಂಗಡಗಿಮೆಟ್ರೋ ಯೋಜನೆಗಳ ಆರ್ಥಿಕ ಹೊರೆ ಕೇಂದ್ರ-ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಲಿ: ಸಿಎಂ ಡಿ.ಕೆ.ಶಿವಕುಮಾರ್ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ