ಮಂಡ್ಯ: ಸಕ್ಕರೆ ನಾಡು ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಸಂಸ್ಕೃತಿ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿಶೇಷವಾಗಿ ರಾಗಿ ಮುದ್ದೆಯ ಶಕ್ತಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದ್ದು ಕಾರ್ಯಕ್ರಮದ ಹೈಲೈಟ್ ಆಗಿತ್ತು.
ರಾಗಿ ಮುದ್ದೆ ಬರೀ ಆಹಾರವಲ್ಲ ಅದೊಂದು ಶಕ್ತಿ: ರಾಗಿ ಮುದ್ದೆ ಕೇವಲ ಊಟವಲ್ಲ, ಅದರಲ್ಲಿ ಅದ್ಭುತ ಶಕ್ತಿಯಿದೆ. ಇದನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ದೆಹಲಿಯವರೆಗೂ ಕೊಂಡೊಯ್ದು ಫೇಮಸ್ ಮಾಡಿದ್ದಾರೆ ಎಂದು ಮೋದಿ ಹೇಳಿದರು. ಅಲ್ಲದೆ, ಇಂದಿನ ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕು ಎಂದು ಕರೆ ನೀಡಿದರು.
https://twitter.com/i/broadcasts/1lJQRvjqbyBxE?s=20
ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಂಗಮ: ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಭೂಮಿಯಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಈ ಮಣ್ಣು ಸಮೃದ್ಧವಾಗಿದೆ ಎಂದು ಬಣ್ಣಿಸಿದರು.
ಆದಿಚುಂಚನಗಿರಿ ಮಠದ ಸೇವೆಗೆ ನಮನ: ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮಠ ಜೀವಂತವಾಗಿರಿಸಿದೆ. ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರು ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮಾಡಿದ ಶೈಕ್ಷಣಿಕ ಕ್ರಾಂತಿಯನ್ನು ಮೋದಿ ಸ್ಮರಿಸಿದರು.
ಜೀವನಶೈಲಿ ಬದಲಾವಣೆಗೆ ಕರೆ: ಬೊಜ್ಜು ಮತ್ತು ಆಧುನಿಕ ಜೀವನಶೈಲಿಯ ಸವಾಲುಗಳನ್ನು ಪ್ರಸ್ತಾಪಿಸಿದ ಮೋದಿ ನಿತ್ಯ ಯೋಗ ಮಾಡಿ ಹಾಗೂ ಆಹಾರದಲ್ಲಿ ಬಳಸುವ ಎಣ್ಣೆಯನ್ನು ಶೇ.10ರಷ್ಟು ಕಡಿಮೆ ಮಾಡಿ ಎಂದು ಜನರಿಗೆ ಕಿವಿಮಾತು ಹೇಳಿದರು.
ಮಣ್ಣಿನ ಮಗನಿಗೆ ಮೋದಿಯ ಮೆಚ್ಚುಗೆ:
ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ತಮ್ಮ ರಾಗಿ ಮುದ್ದೆಯ ಪ್ರೇಮವನ್ನು ಬಿಡಲಿಲ್ಲ. ದೆಹಲಿಯ ಲೂಟ್ಯನ್ಸ್ ವಲಯದಲ್ಲಿ ಕರ್ನಾಟಕದ ಈ ಸಾಂಪ್ರದಾಯಿಕ ಆಹಾರದ ಘಮಲು ಹರಡುವಂತೆ ಮಾಡಿದರು,” ಎಂದು ಹೇಳುವ ಮೂಲಕ ಮಣ್ಣಿನ ಮಗ ರಾಗಿಗೆ ತಂದುಕೊಟ್ಟ ಜಾಗತಿಕ ಬ್ರ್ಯಾಂಡಿಂಗ್ ಅನ್ನು ಮೋದಿ ಗೌರವಿಸಿದರು.

