ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ (KSRTC) ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಮೇ 20ರಂದು ಕರ್ತವ್ಯ ನಿರ್ವಹಿಸದ ಸಿಬ್ಬಂದಿಗೆ ‘ನೋ ವರ್ಕ್, ನೋ ಪೇ’ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದೆ. ಹೋರಾಟದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಸೇವಾ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್ ಪಾಷಾ ಹೇಳಿದ್ದಾರೆ. ಎಲ್ಲಾ ಸಿಬ್ಬಂದಿಯೂ ಕಡ್ಡಾಯವಾಗಿ ಡ್ಯೂಟಿಗೆ ಹಾಜರಾಗಬೇಕು. ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವೆಯಾಗಿರುವುದರಿಂದ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು ಎಂದು ಸೂಚಿಸಲಾಗಿದೆ. ಅಗತ್ಯ ಪರಿಸ್ಥಿತಿ ಹೊರತುಪಡಿಸಿ ರಜೆ ಮಂಜೂರು ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಮುಷ್ಕರದ ದಿನ ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಿ ವೇತನ ಕಡಿತಗೊಳಿಸಲಾಗುವುದು. ಜೊತೆಗೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.