ಹೈಲೈಟ್ಸ್:
ರಾಯಚೂರು ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 265 ಕೋಟಿ ರೂ. ಮೀನು ವ್ಯಾಪಾರ ನಡೆಯುತ್ತಿದೆ
ಜಿಲ್ಲೆಯಲ್ಲಿ ಒಂದೇ ಒಂದು ಮಂಜುಗಡ್ಡೆ ಘಟಕವೂ ಇಲ್ಲ
ಹೀಗಾಗಿ ಐಸ್‌ಗಾಗಿ ಮೀನುಗಾರರು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಅವಲಂಬಿಸುವಂತಾಗಿದೆ
ರಾಯಚೂರು: ಕೋಟ್ಯಂತರ ರೂ. ಮೌಲ್ಯದ ಮೀನು ವ್ಯಾಪಾರ ನಡೆಯುತ್ತಿದ್ದರೂ ತಾಜಾ ಮೀನುಗಳನ್ನು ಸಂರಕ್ಷಿಸುವಲ್ಲಿ ಜಿಲ್ಲೆಯ ಮೀನುಗಾರರು ಮತ್ತು ಮಾರಾಟಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಮಂಜುಗಡ್ಡೆ ಘಟಕಗಳ ಕೊರತೆಯಿಂದಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಐಸ್ ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತಮ ಆದಾಯ ತರುವ ಕೃಷಿ ಚಟುವಟಿಕೆಗಳಲ್ಲಿ ಮೀನು ಸಾಕಾಣಿಕೆಯೂ ಪ್ರಮುಖವಾಗಿದೆ. ಅನುಕೂಲಕರ ಹವಾಮಾನ, ನೀರಿನ ಲಭ್ಯತೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಂದ ಜಿಲ್ಲೆಯ ಅನೇಕ ರೈತರು ಮೀನು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಕಳೆದ ಕೆಲವು ವರ್ಷಗಳಿಂದ ಮೀನು ಸಾಕಾಣಿಕೆ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಕೆರೆಗಳಲ್ಲಿ ಮೀನು ಮರಿ ಸಾಕಾಣಿಕೆ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ವರ್ಷದಿಂದ ವರ್ಷಕ್ಕೆ 200ರಿಂದ 250 ಎಕರೆ ಪ್ರದೇಶದಲ್ಲಿ ಹೆಚ್ಚುವರಿ ಮೀನು ಉತ್ಪಾದನೆ ಆಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 20,235 ಟನ್ ಮೀನು ಉತ್ಪಾದನೆಯಾಗಿದ್ದು, ಅದರಲ್ಲಿ 4,100 ಟನ್ ಸಿಗಡಿ ತಳಿಯ ಮೀನುಗಳೇ ಆಗಿವೆ.
265 ಕೋಟಿ ರೂ. ವಹಿವಾಟು:
ಜಿಲ್ಲೆಯಲ್ಲಿ ಮೀನು ಸೇವನೆ ಕಡಿಮೆ ಇದ್ದರೂ ಹೊರ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ಮೀನು ಸರಬರಾಜು ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮವಾಗಿ ವರ್ಷಕ್ಕೆ ಸರಾಸರಿ 265.06 ಕೋಟಿ ರೂ. ಮೀನು ವಹಿವಾಟು ನಡೆಯುತ್ತಿದೆ. ರೋಗ್, ಮೃಗಾಲ್, ಹುಲ್ಲುಗಂಡೆ, ಬಿಳಚಿ, ಬಾಳೆ, ಗೌರಿ, ಕಾಟ್ಲ ಮುಂತಾದ ಮೀನುಗಳನ್ನು ಗ್ರಾಹಕರಿಗೆ ತಲುಪುವವರೆಗೆ ತಾಜಾ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ವ್ಯಾಪಾರಿಗಳಿಗೆ ಸವಾಲಾಗಿದೆ. ಜಿಲ್ಲೆಯಲ್ಲಿ ಮಂಜುಗಡ್ಡೆ ಘಟಕಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಹೆಚ್ಚುತ್ತಿರುವ ವೆಚ್ಚ:
ಮಂಜುಗಡ್ಡೆ ಘಟಕ ಸ್ಥಾಪನೆಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರಾಯಚೂರು ಮತ್ತು ಸಿಂಧನೂರು ತಾಲೂಕುಗಳಿಗೆ ತಲಾ 30 ಟನ್ ಹಾಗೂ ಮಾನ್ವಿ, ದೇವದುರ್ಗ, ಲಿಂಗಸುಗೂರು ತಾಲೂಕುಗಳಿಗೆ ತಲಾ 10 ಟನ್ ಸಾಮರ್ಥ್ಯದ ಐಸ್ ಪ್ಲಾಂಟ್ ಸ್ಥಾಪನೆಗೆ ಅನುದಾನ ಕೋರಲಾಗಿದೆ. ಆದರೂ ಯೋಜನೆ ಇನ್ನೂ ಜಾರಿಯಾಗಿಲ್ಲ. ಖಾಸಗಿ ಮಂಜುಗಡ್ಡೆ ಘಟಕಗಳೂ ಇಲ್ಲದ ಕಾರಣ ಮೀನು ಮಾರಾಟಗಾರರು ಹೆಚ್ಚಿನ ಹಣ ವೆಚ್ಚ ಮಾಡಿ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಐಸ್ ತರಿಸಿಕೊಳ್ಳುತ್ತಿದ್ದಾರೆ.
ಅನ್ಯರಾಜ್ಯಗಳ ಅವಲಂಬನೆ:
ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೆಚ್ಚಾಗುತ್ತಿದ್ದರೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಸಿಂಧನೂರು, ಲಿಂಗಸುಗೂರು, ಮಾನ್ವಿ, ದೇವದುರ್ಗ ಹಾಗೂ ರಾಯಚೂರು ಭಾಗದ ಮೀನುಗಾರರು ಮೀನುಗಳನ್ನು ವಾರದವರೆಗೆ ತಾಜಾ ಇಡಲು ಅಗತ್ಯವಿರುವ ಮಂಜುಗಡ್ಡೆಯನ್ನು ಆಂಧ್ರಪ್ರದೇಶದ ಕರ್ನೂಲು, ತೆಲಂಗಾಣದ ಮಹೆಬೂಬ್‌ನಗರ ಮತ್ತು ಕಾರವಾರ ಭಾಗಗಳಿಂದ ತರಿಸಿಕೊಳ್ಳಬೇಕಾಗಿದೆ.
ಇದರಿಂದ ಮೀನುಗಾರರು ಮತ್ತು ವ್ಯಾಪಾರಿಗಳ ಮೇಲಿನ ವೆಚ್ಚ ಹೆಚ್ಚುತ್ತಿದ್ದು, ಅದರ ಹೊರೆ ಪರೋಕ್ಷವಾಗಿ ಗ್ರಾಹಕರ ಮೇಲೂ ಬೀಳುತ್ತಿದೆ. ಈ ನಡುವೆ ಮೊದಲ ಬಾರಿಗೆ ಖಾಸಗಿ ಒಡೆತನದ 20 ಟನ್ ಸಾಮರ್ಥ್ಯದ ಮಂಜುಗಡ್ಡೆ ಘಟಕ ಸ್ಥಾಪನೆಯಾಗುತ್ತಿದ್ದು, ಇದು ಜಿಲ್ಲೆಯ ಮೀನುಗಾರರು ಮತ್ತು ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ನೆರವು ನೀಡುವ ನಿರೀಕ್ಷೆ ಮೂಡಿಸಿದೆ.