ಬೆಂಗಳೂರು, ಫೆ.15 – ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ರಾಜ್ಯದ ಪ್ರಮುಖ ಶಿವ ದೇವಾಲಯಗಳಲ್ಲಿ ಭಕ್ತರ ಸಂಚಾರ ಹೆಚ್ಚಾಗಿ, ಎಲ್ಲೆಡೆ ಶಿವನಾಮ ಸ್ಮರಣೆ ಮೊಳಗಿತು. ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಮಲೈ ಮಹದೇಶ್ವರ ಬೆಟ್ಟದ ದೇವಾಲಯ, ಆದಿ ಚುಂಚನಗಿರಿಯ ಕಾಲಭೈರವೇಶ್ವರಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ, ಧರ್ಮಸ್ಥಳ ಮಂಜುನಾಥ, ಮಂಗಳೂರಿನ ಕದ್ರಿ ಮಂಜುನಾಥ, ಗೋಕರ್ಣದ ಮಹಾಬಲೇಶ್ವರ, ಮುರುಡೇಶ್ವರ, ಬೆಂಗಳೂರಿನ ಗವಿ ಗಂಗಾಧರೇಶ್ವರ ಹಾಗೂ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯ ಸೇರಿದಂತೆ ನಾಡಿನ ಅನೇಕ ಶಿವಾಲಯಗಳಲ್ಲಿ ಭಕ್ತರ ಜಮಾವಣೆ ಕಂಡುಬಂತು. ಶಿವರಾತ್ರಿ ಅಂಗವಾಗಿ ದೇವಾಲಯಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ದಿನಪೂರ್ತಿ ವಿಶೇಷ ಪೂಜೆಗಳು ಮತ್ತು ಶಿವಸ್ತೋತ್ರ ಪಾರಾಯಣಗಳು ನಡೆದವು. ರಾತ್ರಿ ಜಾಗರಣೆಯ ಕಾರ್ಯಕ್ರಮಗಳೂ ಆಯೋಜಿಸಲ್ಪಟ್ಟಿವೆ.
ಶಿವನಿಗೆ ಪ್ರಿಯವಾದ ಬಿಲ್ವಪತ್ರೆಗೆ ಮಾರುಕಟ್ಟೆಯಲ್ಲಿ ಹೆಚ್ಚಾದ ಬೇಡಿಕೆ ಕಂಡುಬಂದಿದ್ದು, ಹೂವು ಹಾಗೂ ಪೂಜೆ ಸಾಮಗ್ರಿಗಳ ದರ ಏರಿಕೆಯಾಗಿದೆ. ಅನೇಕರು ತಮ್ಮ ಮನೆಗಳನ್ನು ಅಲಂಕರಿಸಿ, ರಂಗೋಲಿಗಳನ್ನು ಬಿಡಿಸಿ ಬಂಧು-ಮಿತ್ರರೊಂದಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಭಾನುವಾರವಾಗಿದ್ದ ಹಿನ್ನೆಲೆ ಕುಟುಂಬ ಸಮೇತ ದೇವಾಲಯಗಳಿಗೆ ತೆರಳಿ ಶಿವನ ದರ್ಶನ ಪಡೆಯುವುದು ಎಲ್ಲೆಡೆ ಸಾಮಾನ್ಯ ದೃಶ್ಯವಾಗಿತ್ತು. ಹರನಾಮ ಸ್ಮರಣೆಯೊಂದಿಗೆ ನಾಡಿನಾದ್ಯಂತ ಮಹಾ ಶಿವರಾತ್ರಿ ಭಕ್ತಿಭಾವದಿಂದ ಆಚರಿಸಲಾಯಿತು.