Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಜೋಳಿಗೆ ಹಿಡಿದು ದುಶ್ಚಟಗಳನ್ನು ದಾನವಾಗಿ ಸ್ವೀಕರಿಸಿದ ಇಳಕಲ್‌ನ  ಶ್ರೀಗಳು!

ದುಡ್ಡನ್ನೋ, ಧಾನ್ಯವನ್ನೋ ಜೋಳಿಗೆಯಲ್ಲಿ ಭಿಕ್ಷೆ ಬೇಡುವ ಜಗತ್ತಿನಲ್ಲಿ, ಜನರ ಭವಿಷ್ಯವನ್ನು ಹಾಳುಮಾಡುವ ದುಶ್ಚಟಗಳನ್ನೇ ದಾನವಾಗಿ ಕೇಳಿ ಪಡೆದ ಜಗತ್ತಿನ ಏಕೈಕ ಮಹಾಪುರುಷ ಪರಮಪೂಜ್ಯ ಡಾ. ಮಹಾಂತ ಶಿವಯೋಗಿ ಮಹಾಸ್ವಾಮಿಗಳು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೀಠಾಧಿಪತಿಗಳಾಗಿದ್ದ ಶ್ರೀಗಳವರು, ಆರು ದಶಕಗಳ ಕಾಲ ಸಮಾಜ ಸುಧಾರಣೆಯ ಒಂದು ಅದ್ಭುತ ಇತಿಹಾಸವನ್ನೇ ಬರೆದಿದ್ದಾರೆ.
ಇಳಕಲ್‌ನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಡಾ. ಮಹಾಂತ ಶಿವಯೋಗಿಗಳು (ಮಹಾಂತ ಜೋಳಿಗೆಯ ಹರಿಕಾರರು) ವ್ಯಸನಮುಕ್ತ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ. ಅವರು ಮದ್ಯಪಾನ ಹಾಗೂ ಇತರ ದುಶ್ಚಟಗಳನ್ನು ತೊಡೆದುಹಾಕಲು 'ಮಹಾಂತ ಜೋಳಿಗೆ' ಆಂದೋಲನವನ್ನು ಆರಂಭಿಸಿ ಅಪಾರ ಜನಜಾಗೃತಿ ಮೂಡಿಸಿದ್ದವರು. ಯುವಕರನ್ನು ಮತ್ತು ಸಮಾಜವನ್ನು ದುಶ್ಚಟಗಳಿಂದ ದೂರವಿಡಲು ಇಡೀ ರಾಜ್ಯದಾದ್ಯಂತ ಜೋಳಿಗೆ ಹಿಡಿದು ಭಿಕ್ಷೆ ಬೇಡುವ ಮೂಲಕ, ವ್ಯಸನ ಬಿಡುವಂತೆ ಸಂದೇಶ ಸಾರಿದ್ದಾರೆ. ಈ ಮುಖಾಂತರ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಕುಡಿತ ಮತ್ತು ಇತರೆ ದುಶ್ಚಟಗಳಿಂದ ಜನರನ್ನು ದೂರವಿಡಲು 1975 ರಲ್ಲಿ ಪ್ರಾರಂಭಿಸಿದ ಈ ಆಂದೋಲನವು ಅಪಾರ ಜನಪ್ರಿಯತೆ ಪಡೆಯಿತು. ಸಾರ್ವಜನಿಕರ ದುಶ್ಚಟಗಳನ್ನು ಬಿಡಿಸಿ, ಅವರ ಮನ ಪರಿವರ್ತಿಸಿ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಚಟಗಳನ್ನು ಬೇಡುವ ಮೂಲಕ ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ್ದಾರೆ. ಇದರಂತೆ ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದಾಗ ಗಂಜಿ ಕೇಂದ್ರಗಳನ್ನು ಆರಂಭಿಸಿ ಜನರಿಗೆ ಆಹಾರ ಒದಗಿಸಿದವರು. ಜೊತೆಗೆ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಿರುತ್ತಾರೆ.ಮಠದ ನೂರಾರು ಎಕರೆ ಭೂಮಿಯನ್ನು ಬಡ ರೈತರಿಗೆ ಕೃಷಿ ಮಾಡಲು ನೀಡಿರುತ್ತಾರೆ. ದೇವದಾಸಿ ಪದ್ಧತಿಯ ನಿರ್ಮೂಲನೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್ ಸ್ಥಾಪನೆ ಮತ್ತು ವಿಧವೆಯರಿಗೆ 'ಕಾಯಕ ಸಂಜೀವಿನಿ' ಸಂಸ್ಥೆಯನ್ನು ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬನೆಗೆ ಕಾರಣಿಕರ್ತರು.ಅಂತೆಯೇ ಸಮಾಜಿಕ ಕ್ರಾಂತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅದೇ ರೀತಿ ಮೌಢ್ಯಗಳನ್ನು ವಿರೋಧಿಸಿ ಸರಳ ವಿವಾಹಗಳನ್ನು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಮಹಿಳೆಯರಿಗೆ 'ಜಂಗಮ ದೀಕ್ಷೆ' ನೀಡಿ ಮಠಾಧಿಕಾರಿಯನ್ನಾಗಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದವರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರಕ್ಕೆ ಶ್ರಮಿಸಿದ ನಿಜವಾದ ಜಂಗಮರು ಡಾ. ಮಹಾಂತ ಶಿವಯೋಗಿಗಳು ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಅಂತೆಯೇ 
1970 ರಲ್ಲಿ ಪೀಠಾಧಿಪತಿಯಾದ ಡಾ.ಮಹಾಂತ ಸ್ವಾಮೀಜಿ ಅವರು ಬಸವ ತತ್ವ ನಿಷ್ಠರು. ಬಸವಧರ್ಮದ ಆಚೆಗಿರುವ ಯಾವುದನ್ನು ಒಪ್ಪಿಕೊಳ್ಳರು. ಹೀಗಾಗಿ ವೈಚಾರಿಕವಲ್ಲದ ಆಚರಣೆಗಳನ್ನು, ಪರಂಪರೆಗಳನ್ನು ತಿರಸ್ಕರಿಸಿ, ಬಸವ ತತ್ವ, ಆದರ್ಶಗಳ ಉಳಿವಿಗಾಗಿ ಹೋರಾಡಿದವರು.
ಬಸವ ತತ್ವ ಪ್ರಸಾರಕ್ಕಾಗಿ, ವಚನಗಳ ರಕ್ಷಣೆಗಾಗಿ ನಾಡಿನಾದ್ಯಂತ ಸಂಚರಿಸಿದರು. ತಾಳೆ ಗರಿಗಳ ವಚನ ಸಂಪುಟದ ಗಂಟೊಂದು ಸದಾ ಅವರ ಬೆನ್ನು ಮೇಲೆ ಇರುತ್ತಿತ್ತು. ಅವರು ಬಸವಣ್ಣನವರನ್ನು ಅಪ್ಪನೆಂದು ಅವರ ವಚನಗಳಿಗೆ ಅಪ್ಪನ ವಚನಗಳೆಂದು ಸಂಬೋಧಿಸುತ್ತಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಮಹಾಂತ ಜೋಳಿಗೆ'ಯ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಿಸಿದ ಮಹಾನ್ ಸಂತರು. ಬಸವತತ್ವದ ನಡೆದಾಡುವ ವಿಶ್ವಕೋಶವಾಗಿದ್ದ ಇವರು, ವಚನಗಳ ಆಶಯದಂತೆ ಮೌಢ್ಯ ನಿರ್ಮೂಲನೆ, ಕಾಯಕ ಮತ್ತು ದಾಸೋಹಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 

ಕುಡಿತದ ಮುಕ್ತಿಗೆ 'ಮಹಾಂತ ಜೋಳಿಗೆ'ಯ ಕ್ರಾಂತಿ:
ಯುವಕರು ಮತ್ತು ಸಾರ್ವಜನಿಕರನ್ನು ದುಶ್ಚಟಗಳಿಂದ (ಮದ್ಯಪಾನ, ಧೂಮಪಾನ ಇತ್ಯಾದಿ) ದೂರವಿಡಲು 'ಮಹಾಂತ ಜೋಳಿಗೆ' ಎಂಬ ಅಭೂತಪೂರ್ವ ಆಂದೋಲನವನ್ನು ಆರಂಭಿಸಿದ್ದರು. ಭಕ್ತರು ತಮ್ಮ ದುಶ್ಚಟಗಳನ್ನು ಬಿಟ್ಟು, ಆ ಕೆಟ್ಟ ಚಟಗಳನ್ನು ಜೋಳಿಗೆಗೆ ಹಾಕಿ ಪ್ರಮಾಣ ಮಾಡುವಂತೆ ಜಾಗೃತಿ ಮೂಡಿಸಿದ್ದವರು.
ಭೀಕರ ಬರಗಾಲದ ಸಂದರ್ಭದಲ್ಲಿ ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಿ, ದಾಸೋಹ ಮತ್ತು ಗೋಶಾಲೆಗಳ ಮೂಲಕ ಸಂತ್ರಸ್ತರಿಗೆ ಆಸರೆಯಾಗಿದ್ದರು.ನಾಗಪಂಚಮಿಯಂದು ಹಾವಿಗೆ ಹಾಲೆರೆಯುವ ಪದ್ಧತಿಯನ್ನು ವಿರೋಧಿಸಿ, ಅದೇ ಹಾಲನ್ನು ಬಡ ಮಕ್ಕಳಿಗೆ ವಿತರಿಸುವ ಅಭ್ಯಾಸ ಜಾರಿಗೆ ತಂದವರು.ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ 135ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು (ಶಾಲೆ, ಕಾಲೇಜು, ಆಯುರ್ವೇದ ಸಂಸ್ಥೆಗಳು) ಹುಟ್ಟುಹಾಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿದ ಮಾಹಾ ಶ್ರೇಷ್ಠ ಸಂತರಾಗಿದ್ದಾರೆ.

ಮಹಾಂತ ಜೋಳಿಗೆ ಅಭಿಯಾನ:
ಕುಡಿತದ ಚಟದಿಂದ ತರುಣನೊಬ್ಬ ಮೃತಪಟ್ಟ ಸುದ್ದಿ ಕೇಳಿ ಮರುಗಿದ ಸ್ವಾಮೀಜಿಯವರು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಮೇ ೨೯ರಂದು ಹುನಗುಂದ್‌ನಿಂದ ಹಮ್ಮಿಕೊಂಡ ವಿನೂತನ ಕಾರ್ಯಕ್ರಮವೇ ‘ಮಹಾಂತ ಜೋಳಿಗೆ’.
ಬಿಸಿಲು, ಮಳೆ, ಧೂಳನ್ನೇ ಲೆಕ್ಕಿಸದೆ ಜೋಳಿಗೆ ಹಿಡಿದು ಮನೆಮನೆಗೆ ತೆರಳಿ, ಜನರಲ್ಲಿದ್ದ ಮದ್ಯ, ತಂಬಾಕು, ಜುಗಾರಿ ಮುಂತಾದ ದುಶ್ಚಟಗಳನ್ನು ದಾನ ರೂಪದಲ್ಲಿ ಸ್ವೀಕರಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಬೆಳಕಾದರು.
ಇದು ಭಿಕ್ಷೆಯಲ್ಲ, ಭಿಕ್ಷೆಯ ರೂಪದಲ್ಲಿ ಮಾಡಿದ ಕ್ರಾಂತಿ.  
"ನಿಮ್ಮ ಮನೆಯ ಕಸ ನನಗೆ ಕೊಡಿ" ಅಂತ ಕೇಳಿದರು. ಆ ಕಸವೇನೆಂದರೆ - ಮದ್ಯದ ಬಾಟಲಿ, ತಂಬಾಕಿನ ಡಬ್ಬಿ, ಇಸ್ಪೀಟಿನ ಎಲೆ. ಮಠಾಧೀಶರೊಬ್ಬರು ರಾಜವೈಭವ ಬಿಟ್ಟು ಬೀದಿ-ಬೀದಿ ಅಲೆದು ಜನರ ಪಾಪ ತೊಳೆದರು.

ಬಸವ ತತ್ವಕ್ಕಾಗಿ ಶ್ರೀಗಳ ಸೇವೆ: ಮದುವೆ ಸಮಾರಂಭಗಳಲ್ಲಿ ಅಕ್ಷತೆಯ ಹೆಸರಿನಲ್ಲಿ ಅಕ್ಕಿ ಪೋಲಾಗುವುದನ್ನು ತಪ್ಪಿಸಲು ಮತ್ತು ಸರಳ ವಿವಾಹಗಳನ್ನು ಪ್ರೋತ್ಸಾಹಿಸಲು ವಧು-ವರರು ಹೂವುಗಳನ್ನು ಬಳಸುವ ಪದ್ಧತಿಯನ್ನು ಜಾರಿಗೆ ತಂದವರು.ಮಠದಲ್ಲಿ ದಲಿತರಿಗೂ ಪ್ರವೇಶ ಮತ್ತು ಪ್ರಸಾದಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದರು. ವಚನ ಪಠಣಕ್ಕೆ ಹೆಚ್ಚಿನ ಒತ್ತು ನೀಡಿ, ರುದ್ರಾಭಿಷೇಕದ ಬದಲಾಗಿ ವಚನಾಭಿಷೇಕ ಮತ್ತು ಗದ್ದುಗೆಗಳ ಮೇಲೆ ಮೂರ್ತಿಗಳ ಬದಲಾಗಿ ವಚನ ಸಾಹಿತ್ಯ ಪುಸ್ತಕಗಳನ್ನಿಡುವ ಪರಿಪಾಠ ಹಾಕಿರುತ್ತಾರೆ.ಬಸವಣ್ಣನವರ ಹಾಗೂ ಶರಣರ ತತ್ವಗಳನ್ನು ಮನೆ-ಮನೆಗೆ ಮುಟ್ಟಿಸುವ ಕಾರ್ಯ ಅವರ ಬದುಕಿನ ಉದ್ದಕ್ಕೂ ಮಾಡಿರುತ್ತಾರೆ.

ಸಮಾಜ ಸುಧಾರಣೆಯ ಹರಿಕಾರರು ಮಹಾಂತ್ ಶ್ರೀಗಳು:
• ೩,೫೦೦ಕ್ಕೂ ಹೆಚ್ಚು ಹಳ್ಳಿಗಳು, ನೆರೆಯ ರಾಜ್ಯಗಳು ಹಾಗೂ ವಿದೇಶಗಳಲ್ಲೂ ಸಂಚರಿಸಿ ಲಕ್ಷಾಂತರ ಜನರನ್ನು ವ್ಯಸನಮುಕ್ತಗೊಳಿಸಿದ ಕೀರ್ತಿ ಇವರದ್ದು.  
• ಮಹಿಳೆಯರಿಗೆ ನಿರಂಜನ ದೀಕ್ಷೆ, ಹಿಂದುಳಿದ ವರ್ಗಗಳಿಗೆ ಮಠಾಧಿಪತಿ ಪದವಿ ನೀಡುವ ಮೂಲಕ ಬಸವಣ್ಣನವರ ಸಮಾನತೆಯ ಆಶಯವನ್ನು ನಿಜವಾಗಿಸಿದರು.
• ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ರಾಷ್ಟ್ರೀಯ ಬಸವ ಪುರಸ್ಕಾರ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಸೇವೆಗೆ ಸಂದ ಗೌರವಗಳಾಗಿವೆ. ಇದರಿಂದ ಶ್ರೀಗಳು ಕುಳಿತು ಪ್ರವಚನ ಕೊಡಲಿಲ್ಲ. ನಡೆದು ತೋರಿಸಿದ್ದಾರೆ. "ಮಠ ಮನೆಯಾಗಬೇಕು, ಮನೆ ಮಠವಾಗಬೇಕು" ಎಂಬ ಬಸವಣ್ಣನವರ ಆಶಯವನ್ನು ಜೋಳಿಗೆ ಹಿಡಿದು ಸಾಕಾರಗೊಳಿಸಿದವರು.ಮಠದ ದೊಡ್ಡಿ ದಾಟಿ ಗುಡಿಸಲಿನ ಬಾಗಿಲು ತಟ್ಟಿದ ಮೊದಲ ನಾಡಿನ ಶ್ರೇಷ್ಠ ಸ್ವಾಮೀಜಿ ಇವರಾಗಿದ್ದಾರೆ.

ಆಗಸ್ಟ್ ೧: 'ವ್ಯಸನಮುಕ್ತ ದಿನ':
ಶ್ರೀಗಳವರ ಅನುಪಮ ಸೇವೆಯನ್ನು ಸ್ಮರಿಸಿ, ಅವರ ಜನ್ಮದಿನವಾದ ಆಗಸ್ಟ್ ೧ ಅನ್ನು ಕರ್ನಾಟಕ ಸರ್ಕಾರ ‘ವ್ಯಸನಮುಕ್ತ ದಿನ’ವಾಗಿ ಆಚರಿಸುತ್ತಿದೆ. ೨೦೧೮ರಲ್ಲಿ ಅವರು ಲಿಂಗೈಕ್ಯರಾದರೂ, ಅವರು ಹಾಕಿಕೊಟ್ಟ ಮಹೋನ್ನತ ಹಾದಿ ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿದೆ.

ಇವತ್ತು ನಮ್ಮ ಕರ್ತವ್ಯ ಏನು?
ಸ್ಟೇಟಸ್‌ನಲ್ಲಿ ಶ್ರೀಗಳ ಫೋಟೋ ಹಾಕಿದರೆ ಸಾಲದು. 
ಮಹಾಂತ ಜೋಳಿಗೆಗೆ ನಿಮ್ಮ ದುಶ್ಚಟವನ್ನು ದಾನ ಮಾಡಬೇಕು. ಇವರು ಹಾಕಿಕೊಟ್ಟ ಮಾರ್ಗದಲ್ಲೇ ನಾವೆಲ್ಲರೂ ನಡೆಯಲೇಬೇಕು. ಅದಕ್ಕಾಗಿ 
1. ಕುಡಿತ ಬಿಡಿ - ನಿಮ್ಮ ಮಕ್ಕಳು "ಅಪ್ಪ"
 ಅಂತ ಕರೆಯೋಕೆ ಕಾಯ್ತಿದ್ದಾರೆ.  
2. ತಂಬಾಕು ಬಿಡಿ - ನಿಮ್ಮ ಹೆಂಡತಿ ಮಾಂಗಲ್ಯ ಉಳಿಸಿಕೊಳ್ಳೋಕೆ ಪ್ರಾರ್ಥಿಸ್ತಿದ್ದಾಳೆ.  
3. ಜೂಜು ಬಿಡಿ - ನಿಮ್ಮ ಮನೆ ಅಡವಿಡುವ ಮುನ್ನ ಎಚ್ಚೆತ್ತುಕೊಳ್ಳಿ. ಒಂದು ಬಾಟಲಿ ಬಿಟ್ಟರೆ ಒಂದು ಮನೆ ಉಳಿಯುತ್ತೆ. ಒಂದು ಮನೆ ಉಳಿದರೆ ಒಂದು ತಲೆಮಾರು ಉಳಿಯುತ್ತೆ.
ಈ ನಿಟ್ಟಿನಲ್ಲಿ ನಮ್ಮೆಲ್ಲರ ಹೋರಾಟಗಳು ಮತ್ತು ಜಾಗೃತಿ ಅಭಿಯಾನಗಳು ಸಾಗಲಿ ಎಂಬುದೇ ಈ ಲೇಖನದ ಆಶಯವಾಗಿದೆ.

ಕೊನೆ ಮಾತು:
ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದರು. ಇದರಂತೆ
ಇಳಕಲ್ ಶ್ರೀಗಳು ಜೋಳಿಗೆಯಲ್ಲಿ ಕ್ರಾಂತಿ ಮಾಡಿದರು.  
ಬನ್ನಿ, ಇಳಕಲ್ ಶ್ರೀಗಳ ಹಾದಿಯಲ್ಲಿ ನಾವೆಲ್ಲರೂ ನಡೆದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ!
ನಿಮ್ಮ ದುಶ್ಚಟ ಇವತ್ತೇ ಆ ಜೋಳಿಗೆಗೆ ಹಾಕಿ.
ಏಕೆಂದರೆ ಶ್ರೀಗಳು ಇನ್ನಿಲ್ಲ, ಆದರೆ ಆ ಜೋಳಿಗೆ ಇನ್ನೂ ತೆರೆದಿದೆ. ಕಾರಣ "ವ್ಯಸನಮುಕ್ತ, ಆರೋಗ್ಯವಂತ ಸಮಾಜವನ್ನು ನಿರ್ಮಿಸುವುದೇ ನಾವು ಆ ಮಹಾಪುರುಷನಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ."

ಗೌರವ ನಮನ: ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ
ಬಸವ ತತ್ವ ಮಹಾಂತ  ಜೋಳಿಗೆ ಹರಿಕಾರರಾದ ಪೂಜ್ಯ ಶ್ರೀ ಮ. ನೀ.ಪ್ರ ಡಾ ಮಹಾಂತ ಶಿವಯೋಗಿಗಳ 8ನೇ ಶರಣೋತ್ಸವ ಈ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳು ಸಲ್ಲಿಸುತ್ತೇವೆ.ಬಸವತತ್ವ ಪ್ರಸಾರ, ಸಮಾಜೋದ್ಧಾರ, ಧಾರ್ಮಿಕ ಸೇವೆಗಳು ಹಾಗೂ ತ್ರಿವಿಧ ದಾಸೋಹದ ಮೂಲಕ ಪೂಜ್ಯರು ನಾಡಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯ.

ಸಂಗಮೇಶ ಎನ್ ಜವಾದಿ 
ಸಾಹಿತಿ, ಪತ್ರಕರ್ತರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗನ ಕೊಲೆಯ ಸೇಡು: ರಣಚಂಡಿಯಾದ ಹೆತ್ತವಳು! ರಕ್ತಕ್ಕೆ ರಕ್ತವೆಂದು 12 ವರ್ಷಗಳ ಬಳಿಕ ಮುಹೂರ್ತ ಇಟ್ಟ ತಾಯಿ!₹281.48 ಕೋಟಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯಲ್ಲಿ ಅಕ್ರಮ ಆರೋಪ; ಸರ್ಕಾರದ ತನಿಖೆಗೆ ಆಗ್ರಹಫ್ರೀಡಂ ಹಬ್ಬದಲ್ಲಿ ‘ಮೋದಿ ಮೋದಿ’ ಘೋಷಣೆ; ಡಿಕೆಶಿ ಮಾತಿನಲ್ಲೇ ಜನರಿಗೆ ಟಾಂಗ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ದಂಡಿನ ಆಯ್ಕೆ ಮಾಡುವಂತೆ ಸಿದ್ದು ತುಮಕೂರು ಆಗ್ರಹನಕಲಿ ಎನ್‌ಕೌಂಟರ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ: ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಗೆ ಮನವಿಹಳಿಸಗರ ಸರ್ಕಾರಿ ಶಾಲೆಯ ದುಸ್ಥಿತಿ: ಪುಟಾಣಿಗಳ ಜೀವದೊಂದಿಗೆ ಚೆಲ್ಲಾಟ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪದುಗೃಹ ಸಚಿವರ ಘೋಷಣೆಗೆ ಸವಾಲೇ? ಶಹಾಪುರದಲ್ಲಿ ಮತ್ತೆ ಜೋರಾದ ಅಕ್ರಮ ಮರಳು ಸಾಗಾಟಒಂದು ವಾರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ: ಇಲ್ಲದಿದ್ದರೆ ಬೃಹತ್ ಪ್ರತಿಭಟನೆ – ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆಕೆನಾಲ್ ಒಡೆದು ಸಾವಿರಾರು ಲೀಟರ್ ನೀರು ಪೋಲು: ರೈತರ ಜಮೀನು ಜಲಾವೃತ, ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಆರೋಪನಾರಾಯಣಪುರ ಬಲದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ: ತಕ್ಷಣ ನಿರ್ವಹಣೆಗೆ ರೈತ ಸಂಘ ಆಗ್ರಹ