ಮುಂಬೈ: ದೇಶದ ಆರ್ಥಿಕ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು “ಭಾರತೀಯರು ಒಂದು ವರ್ಷದವರೆಗೆ ಮದುವೆಗಳಿಗೆ ಚಿನ್ನ ಖರೀದಿಸುವುದನ್ನು ತಪ್ಪಿಸಬೇಕು” ಎಂದು ಪ್ರಧಾನಿ Narendra Modi ನೀಡಿದ ಮನವಿ ಮಾರುಕಟ್ಟೆಯಲ್ಲಿ ತಕ್ಷಣದ ಪ್ರಭಾವ ಬೀರಿದೆ. ಪ್ರಧಾನಿಯವರ ಈ ಹೇಳಿಕೆಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ದರದಲ್ಲಿ (Gold Price) ಗಮನಾರ್ಹ ಇಳಿಕೆ ದಾಖಲಾಗಿದೆ.
ಬೆಳಗ್ಗೆ 9:40ರ ವೇಳೆಗೆ ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ 574 ರೂ. ಇಳಿಕೆಯಾಗಿದ್ದು, 1,53,669 ರೂ. ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಇನ್ನೊಂದೆಡೆ ಬೆಳ್ಳಿಯ ದರ ಏರಿಕೆಯಾಗಿದ್ದು, ಜೂನ್ ಫ್ಯೂಚರ್ 698 ರೂ. ಹೆಚ್ಚಳದೊಂದಿಗೆ 2,65,957 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆ ಮುಕ್ತಾಯವಾಗುವ ಸಂಜೆ 3:30ರೊಳಗೆ ದರಗಳಲ್ಲಿ ಇನ್ನಷ್ಟು ಏರಿಳಿತ ಕಾಣುವ ಸಾಧ್ಯತೆಯಿದೆ.
ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ತಂದಿದ್ದು, ಈ ಸವಾಲುಗಳನ್ನು ಎದುರಿಸಲು ದೇಶದ ಜನರು ಸಹಕಾರ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಭಾರತವು ತನ್ನ ಚಿನ್ನದ ಬೇಡಿಕೆಯ ಬಹುಪಾಲನ್ನು ಆಮದುಗಳ ಮೂಲಕವೇ ಪೂರೈಸಿಕೊಳ್ಳುತ್ತಿರುವುದರಿಂದ, ವಿದೇಶಿ ವಿನಿಮಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಚಿನ್ನದ ಆಮದು ವೆಚ್ಚವನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಈ ಮನವಿ ಮಾಡಿದ್ದಾರೆ.