ಮುಂಬೈ: ನೀಟ್ ಯುಜಿ (NEET UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (RCC) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ. ಭಾನುವಾರ ನಡೆದ ಸಿಬಿಐ ದಾಳಿಯ ವೇಳೆ ಮೋಟೆಗಾಂವ್ಕರ್ ಮೊಬೈಲ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಮಾಹಿತಿಗಳು ಪತ್ತೆಯಾಗಿದ್ದು, ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ. ಸಿಬಿಐ ಪ್ರಕಾರ, ಮೋಟೆಗಾಂವ್ಕರ್ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಹಂಚಿಕೆಯಲ್ಲಿ ತೊಡಗಿದ್ದ ಸಂಘಟಿತ ಜಾಲದ ಸಕ್ರಿಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳೊಂದಿಗೆ ಸೇರಿ 2026ರ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಏಪ್ರಿಲ್ 23ರಂದು ಪರೀಕ್ಷೆಗೆ ಮುನ್ನವೇ ಪಡೆದು ಹಲವರಿಗೆ ಹಂಚಿದ್ದಾನೆ ಎನ್ನಲಾಗಿದೆ. ಶಿವರಾಜ್ ನಡೆಸುತ್ತಿರುವ RCC ತರಬೇತಿ ಸಂಸ್ಥೆಗೆ ಲಾತೂರ್‌ನ ಮುಖ್ಯ ಶಾಖೆ ಸೇರಿ ಒಂಬತ್ತು ಶಾಖೆಗಳಿವೆ. ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿ ವಿಶೇಷ ತನಿಖಾ ತಂಡಗಳನ್ನು ರಚಿಸಿದೆ. ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಮತ್ತು ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ 10 ಮಂದಿಯನ್ನು ಬಂಧಿಸಲಾಗಿದೆ. ಶಿವರಾಜ್ ಬಂಧನಕ್ಕೂ ಮೊದಲು ಸಿಬಿಐ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಮನೀಶಾ ಮಾಂಧರೆ ಅವರನ್ನು ಬಂಧಿಸಿತ್ತು. ಇಬ್ಬರೂ ಮನೀಶಾ ವಾಘ್ಮಾರೆ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದು, ಆಕೆಯೂ ಸಿಬಿಐ ವಶದಲ್ಲಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.