ಹೈಲೈಟ್ಸ್:
ಟಿಬಿ ಡ್ಯಾಂ ಭದ್ರತೆಗೆ ಮಂಡಳಿಯಿಂದ ಕಟ್ಟುನಿಟ್ಟಿನ ಕ್ರಮ
ನೀರಿನ ಸೋರಿಕೆ ತಡೆಗೆ ಅಪ್-ಸ್ಟ್ರೀಮ್ ಪಾಯಿಂಟಿಂಗ್ ಕಾಮಗಾರಿ ವೇಗ
ಮುಂದಿನ 20-30 ವರ್ಷಗಳ ಕಾಲ ಗೋಡೆ ಬಲಿಷ್ಠವಾಗಿರಲು ವಿಶೇಷ ರಕ್ಷಣೆ
ಹೊಸಪೇಟೆ (ವಿಜಯನಗರ): 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋದ ಘಟನೆ ಬಳಿಕ ತುಂಗಭದ್ರಾ ಜಲಾಶಯದ ಭದ್ರತೆ ಕುರಿತು ಎಚ್ಚೆತ್ತಿರುವ ತುಂಗಭದ್ರಾ ಮಂಡಳಿ, ಈ ಬಾರಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದಂತೆ ಸಮಗ್ರ ನಿರ್ವಹಣಾ ಕಾರ್ಯ ಕೈಗೊಂಡಿದೆ. ಕೇವಲ ಗೇಟ್ ಬದಲಾವಣೆಗೆ ಸೀಮಿತವಾಗದೇ, ಜಲಾಶಯದ ಸಂಪೂರ್ಣ ರಚನೆಯನ್ನು ಪರಿಶೀಲಿಸಿ ಬಲವರ್ಧನೆ ಮಾಡುವ ಕೆಲಸ ನಡೆಯುತ್ತಿರುವುದು ಗಮನಾರ್ಹವಾಗಿದೆ.
2024ರ ಮಳೆಗಾಲದಲ್ಲಿ ಸಂಭವಿಸಿದ್ದ ತಾಂತ್ರಿಕ ವೈಫಲ್ಯ ಜಲಾಶಯ ನಿರ್ವಹಣೆಯ ಮೇಲಿನ ಪ್ರಶ್ನೆಗಳನ್ನು ಹೆಚ್ಚಿಸಿತ್ತು. ಆ ಅನುಭವವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ಇದೀಗ ಮುನ್ನೆಚ್ಚರಿಕಾ ಕ್ರಮಗಳಿಗೆ ಹೆಚ್ಚು ಒತ್ತು ನೀಡಿ ನಿರ್ವಹಣಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ.
ಜಲಾಶಯದ ಗೋಡೆಗಳ ಬಾಳಿಕೆ ಹೆಚ್ಚಿಸಿ ನೀರಿನ ಸೋರಿಕೆ ತಡೆಯುವ ಉದ್ದೇಶದಿಂದ ಅಪ್-ಸ್ಟ್ರೀಮ್ ಪಾಯಿಂಟಿಂಗ್ ಕಾರ್ಯ ಆರಂಭಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಡ್ಯಾಂನ ಎಡ ಹಾಗೂ ಬಲ ಭಾಗಗಳಲ್ಲೂ ಸಮಾನವಾಗಿ ಕಾರ್ಯ ನಡೆದಿದೆ. ನೀರು ನಿಲ್ಲುವ ಪ್ರದೇಶದಲ್ಲಿರುವ ಕಲ್ಲುಗಳ ನಡುವಿನ ಸಂದುಗಳನ್ನು ಭದ್ರಪಡಿಸುವ ಈ ತಾಂತ್ರಿಕ ಪ್ರಕ್ರಿಯೆ ಜಲಾಶಯದ ಸ್ಥಿರತೆಗೆ ಅತ್ಯಂತ ಮಹತ್ವದ್ದಾಗಿದೆ.
ಏನಿದು ಅಪ್-ಸ್ಟ್ರೀಮ್ ಪಾಯಿಂಟಿಂಗ್?
ಜಲಾಶಯದ ಗೋಡೆಗಳನ್ನು ಕಲ್ಲು ಮತ್ತು ಗಾರೆಯಿಂದ ನಿರ್ಮಿಸಲಾಗಿದ್ದು, ವರ್ಷಗಳ ಕಾಲ ನೀರಿನ ಒತ್ತಡದಿಂದ ಕಲ್ಲುಗಳ ನಡುವಿನ ಗಾರೆ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಗೋಡೆಯೊಳಗೆ ನೀರು ನುಗ್ಗಿ ಸೋರಿಕೆ ಉಂಟಾಗಬಹುದು. ಈ ಸಮಸ್ಯೆ ತಡೆಯಲು ಹಳೆಯ ಗಾರೆಯನ್ನು ತೆರವುಗೊಳಿಸಿ, ಜಲನಿರೋಧಕ ಗುಣವಿರುವ ವಿಶೇಷ ಸಿಮೆಂಟ್ ಮಿಶ್ರಣ ಹಾಗೂ ರಾಸಾಯನಿಕಗಳನ್ನು ಬಳಸಿ ಕಲ್ಲುಗಳ ಸಂದುಗಳನ್ನು ಮರುಭರ್ತಿ ಮಾಡುವ ಪ್ರಕ್ರಿಯೆಯನ್ನೇ ‘ಪಾಯಿಂಟಿಂಗ್ ವರ್ಕ್’ ಎಂದು ಕರೆಯಲಾಗುತ್ತದೆ.
ಟಿಬಿ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇರುವ ಅವಕಾಶವನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ. ಕಲ್ಲುಗಳ ನಡುವೆ ಬೆಳೆದಿದ್ದ ಪಾಚಿ ಹಾಗೂ ಸಡಿಲಗೊಂಡ ಗಾರೆಯನ್ನು ಹೈ-ಪ್ರೆಶರ್ ವಾಟರ್ ಜೆಟ್ ಮೂಲಕ ತೆರವುಗೊಳಿಸಿ, ಬಳಿಕ ವಿಶೇಷ ಕಾಂಕ್ರೀಟ್ ಮಿಶ್ರಣವನ್ನು ತುಂಬಲಾಗುತ್ತಿದೆ. ಜಲಾಶಯದ ತಳಮಟ್ಟದವರೆಗೂ ಈ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ ಎರಡು-ಮೂರು ದಶಕಗಳ ಕಾಲ ಗೋಡೆ ಸುರಕ್ಷಿತವಾಗಿರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯದಿಂದ ಜಲಾಶಯದ ಹಿಂಭಾಗದಲ್ಲಿ ಕಂಡುಬರುವ ಸಣ್ಣ ಪ್ರಮಾಣದ ನೀರಿನ ಸೋರಿಕೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಜೊತೆಗೆ, ಕಲ್ಲುಗಳ ನಡುವಿನ ಬಂಧ ಮತ್ತಷ್ಟು ಗಟ್ಟಿಯಾಗುವುದರಿಂದ ಡ್ಯಾಂನ ಒಟ್ಟಾರೆ ರಚನಾ ಸ್ಥಿರತೆ ಹೆಚ್ಚಿ, ನೀರಿನ ಒತ್ತಡದಿಂದ ಗೋಡೆಯ ಕಲ್ಲುಗಳು ಸಡಿಲಗೊಳ್ಳುವ ಅಪಾಯವೂ ಕಡಿಮೆಯಾಗಲಿದೆ.